ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ಉದ್ಯಮಿ ರಾಜ್ ಕುಂದ್ರಾ
- ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು
- ಉದ್ಯಮಿ ರಾಜ್ ಕುಂದ್ರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ
- ಈ ಹಿಂದೆ ಅಶ್ಲೀಲ ಸಿನಿಮಾ ನಿರ್ಮಿಸಿ ಜೈಲಿಗೆ ಹೋಗಿ ಬಂದಿದ್ದ ರಾಜ್ ಕುಂದ್ರಾ
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರಿಗೆ ಬಿಟ್‌ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಜಾಮೀನನ್ನು ನೀಡಿದೆ ಎಂದು ವರದಿಯಾಗಿದೆ.
ಏನಿದು ಪ್ರಕರಣ?
ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಗೇನ್‌ಬಿಟ್‌ಕಾಯಿನ್ ನ ಪ್ರವರ್ತಕ ಅಮಿತ್ ಭಾರದ್ವಾಜ್, ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡುವ ಮೂಲಕ ಭಾರಿ ಲಾಭದ ಭರವಸೆ ನೀಡಿ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಲಾಗಿದೆ ಎಂದು ಪುಣೆಯ ನಿಗ್ಡಿ ಮತ್ತು ನಾಂದೇಡ್ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ಮುಂದುವರೆಸಿದ ಪೊಲೀಸರಿಗೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಆರೋಪಿ ಅಮಿತ್ ಭಾರದ್ವಾಜ್ ಅವರಿಂದ 285 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ಇಡಿ ಆರೋಪಿಸಲಾಗಿದ್ದು ಈ ಬಿಟ್‌ಕಾಯಿನ್‌ಗಳ ಅಂದಾಜು ಮೊತ್ತ 150 ಕೋಟಿ ಎಂದು ಹೇಳಲಾಗಿತ್ತು.
ಇಡಿ ತನಿಖೆ
ಈ ಪ್ರಕರಣ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದ್ದರಿಂದ ಮುಂದಿನ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ಮುಂದುವರೆಸಿ, ದುಬೈ ಮೂಲದ ಉದ್ಯಮಿ ರಾಜೇಶ್ ಸತಿಜಾ ಮತ್ತು ರಾಜ್ ಕುಂದ್ರಾ ಅವರಿಗೆ ಸಮನ್ಸ್ ನೀಡಿ, ಸೆಪ್ಟೆಂಬರ್ 2025 ರಲ್ಲಿ, ಪಿಎಂಎಲ್‌ಎ ಅಡಿಯಲ್ಲಿ ಇವರಿಬ್ಬರನ್ನು ಆರೋಪಿಗಳೆಂದು ಹೆಸರಿಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ನ್ನು ಸಲ್ಲಿಸಿತು.
ಮಾಹಿತಿ ನೀಡಲು ನಿರಾಕರಿಸಿದ್ದ ರಾಜ್ ಕುಂದ್ರಾ
ವಿಚಾರಣೆಯ ವೇಳೆ ಬಿಟ್‌ಕಾಯಿನ್‌ಗಳ ವ್ಯಾಲೆಟ್ ವಿಳಾಸಗಳನ್ನು ನೀಡಲು ರಾಜ್ ಕುಂದ್ರಾ ನಿರಾಕರಿಸಿದ್ದರೆಂಬ ಆರೋಪ ಕೇಳಿಬಂದಿತ್ತು. ತನಿಖಾ ಸಂಸ್ಥೆಯ ಪ್ರಕಾರ, ಅಕ್ರಮ ಆದಾಯವನ್ನು ಕಾನೂನುಬದ್ಧಗೊಳಿಸುವ ಸಲುವಾಗಿ ಕುಂದ್ರಾ, ತನ್ನ ಪತ್ನಿಯೊಂದಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಆಸ್ತಿಗಳನ್ನು ಖರೀದಿಸಿದ್ದರೆಂದು ಆರೋಪಿಸಲಾಗಿತ್ತು.
ಯಾರು ಈ ರಾಜ್ ಕುಂದ್ರಾ?
ರಾಜ್ ಕುಂದ್ರಾ ಪ್ರಸಿದ್ಧ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ಇವರು ಉದ್ಯಮದ ಜತೆಗೆ ಸಿನಿಮಾ ನಿರ್ಮಾಣದಲ್ಲಿ ಸಹ ಸಕ್ರೀಯರಾಗಿದ್ದು, ಬಾಲಿವುಡ್ ಮತ್ತು ಪಂಜಾಬಿ ಚಿತ್ರೋದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ, ರಾಜ್ ಕುಂದ್ರಾ ಅಶ್ಲೀಲ ಸಿನಿಮಾ(Adult Film) ಗಳನ್ನು ನಿರ್ಮಿಸಿದ್ದ ಆರೋಪದಲ್ಲಿ ಜೈಲಿಗೆ ಸಹ ಹೋಗಿ ಬಂದಿದ್ದರು,(ಏಜನ್ಸೀಸ್).