ಪುದುಚೇರಿ: ಬಿರಿಯಾನಿ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ಹಾಗೂ ಅಷ್ಟೇ ಇಂಟರೆಸ್ಟಿಂಗ್(Biryani Story) ಸುದ್ದಿಯಿದೆ. ಹೋಟೆಲ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಸತ್ತ ನೊಣ ಸಿಕ್ಕಿದ್ದಕ್ಕೆ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗ್ರಾಹಕನಿಗೆ ಆದ ಮಾನಸಿಕ ಹಿಂಸೆಗೆ 10 ಸಾವಿರ ರೂಪಾಯಿ ಪರಿಹಾರ ಕೊಡುವುದರ ಜೊತೆಗೆ, ಅದೇ ಹೋಟೆಲ್‌ನಿಂದ 10 ಪ್ಲೇಟ್ ಹೈದರಾಬಾದಿ ಚಿಕನ್ ಬಿರಿಯಾನಿಯನ್ನು ಉಚಿತವಾಗಿ ಗ್ರಾಹಕನಿಗೆ ಆರ್ಡರ್ ಮಾಡುವಂತೆ ಗ್ರಾಹಕರ ನ್ಯಾಯಾಲಯ (Consumer Court) ವಿಶಿಷ್ಟ ಆದೇಶ ಹೊರಡಿಸಿದೆ!
ನಡೆದಿದ್ದೇನು?
ಪುದುಚೇರಿಯ ಎಂ.ಜಿ. ರಸ್ತೆಯಲ್ಲಿರುವ ಪ್ರಸಿದ್ಧ 'ಬಿರಿಯಾನಿ ಆಂಡ್ ಕೋ' (Biryani & Co.) ಹೋಟೆಲ್‌ಗೆ ಪಿ. ಸುಂದರಕುಮಾರ ಮಾಣಿಕಂದನ್ ಎಂಬ ಗ್ರಾಹಕರು ತಮ್ಮ ಸ್ನೇಹಿತನ ಜೊತೆ ಬಿರಿಯಾನಿ ತಿನ್ನಲು ಹೋಗಿದ್ದರು. ಆದರೆ, ಅವರಿಗೆ ಸರ್ವ್ ಮಾಡಿದ ಬಿರಿಯಾನಿಯಲ್ಲಿ ಸತ್ತ ನೊಣವೊಂದು ಬಿದ್ದಿರುವುದು ಕಂಡುಬಂದಿದೆ. ಹೋಟೆಲ್‌ನ ಸ್ವಚ್ಛತೆಯ ಲೋಪದಿಂದ ಬೇಸತ್ತ ಗ್ರಾಹಕ, ತಕ್ಷಣವೇ ಅದನ್ನು ತಮ್ಮ ಮೊಬೈಲ್‌ನಲ್ಲಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ಇದರಿಂದ ತಮಗೆ ಮಾನಸಿಕ ಬೇಸರವಾಗಿದೆ ಮತ್ತು ಆರೋಗ್ಯದ ಭಯ ಶುರುವಾಗಿದೆ ಎಂದು ಹೋಟೆಲ್ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.
ಟ್ವಿಸ್ಟ್ ಕೊಟ್ಟ ಗೂಗಲ್ ರಿವ್ಯೂ!
ಗ್ರಾಹಕರು ತಮಗಾದ ಕೆಟ್ಟ ಅನುಭವವನ್ನು ಗೂಗಲ್ ರಿವ್ಯೂನಲ್ಲಿ (Google Review) ಬರೆದಾಗ, ಹೋಟೆಲ್‌ನವರು "ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ, ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ" ಎಂದು ರಿಪ್ಲೈ ಮಾಡಿದ್ದರು. ಆದರೆ, ಗ್ರಾಹಕರು ಲೀಗಲ್ ನೋಟಿಸ್ ಕಳುಹಿಸಿದಾಗ ಮಾತ್ರ "ನಮ್ಮದೇನೂ ತಪ್ಪಿಲ್ಲ" ಎಂದು ಉಲ್ಟಾ ಹೊಡೆದಿದ್ದರು. ಹೋಟೆಲ್‌ನವರ ಈ ದ್ವಂದ್ವ ನಿಲುವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತು. ಕೋರ್ಟ್ ನೋಟಿಸ್ ನೀಡಿದರೂ ಹೋಟೆಲ್‌ನವರು ವಿಚಾರಣೆಗೆ ಹಾಜರಾಗದ ಕಾರಣ, ಗ್ರಾಹಕರು ನೀಡಿದ ವಿಡಿಯೋ ಸಾಕ್ಷ್ಯಗಳನ್ನು ನೋಡಿ ನ್ಯಾಯಾಲಯ ತೀರ್ಪು ನೀಡಿದೆ.
ಕೋರ್ಟ್ ನೀಡಿದ ತೀರ್ಪು ಏನು?
ಗ್ರಾಹಕ ರಕ್ಷಣೆ ಕಾಯ್ದೆ ಅಡಿಯಲ್ಲಿ ಹೋಟೆಲ್‌ನ ಸೇವೆಯಲ್ಲಿ ಲೋಪವಾಗಿದೆ ಎಂದು ಪುದುಚೇರಿ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.
ಹಣದ ಪರಿಹಾರ: ಗ್ರಾಹಕನಿಗಾದ ಮಾನಸಿಕ ಮತ್ತು ದೈಹಿಕ ತೊಂದರೆಗೆ ಹೋಟೆಲ್‌ನವರು 10,000 ರೂಪಾಯಿ ಪರಿಹಾರ ನೀಡಬೇಕು. ಜೊತೆಗೆ ಕೋರ್ಟ್ ಕೇಸಿನ ಖರ್ಚಿಗಾಗಿ 3,000 ರೂಪಾಯಿ ಕೊಡಬೇಕು ಎಂದು ಆದೇಶಿಸಿದೆ.
10 ಪ್ಲೇಟ್ ಉಚಿತ ಬಿರಿಯಾನಿ ಆಫರ್!: ಇದರ ಜೊತೆಗೆ, ಗ್ರಾಹಕನಿಗೆ ಅದೇ ಹೋಟೆಲ್‌ನಿಂದ ಒಟ್ಟು 10 ಪ್ಲೇಟ್ ಹೈದರಾಬಾದಿ ಚಿಕನ್ ಬಿರಿಯಾನಿಯನ್ನು ಸಂಪೂರ್ಣ ಉಚಿತವಾಗಿ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಕೋರ್ಟ್ ಹಾಕಿದ ಕಂಡಿಷನ್: ಈ 10 ಪ್ಲೇಟ್ ಬಿರಿಯಾನಿಯನ್ನು ಒಂದೇ ಸಾರಿಗೆ ಕೊಡುವಂತಿಲ್ಲ! ಮುಂದಿನ ಸತತ 5 ಭಾನುವಾರಗಳ ಕಾಲ, ಪ್ರತಿ ಭಾನುವಾರ ಕೇವಲ 2 ಪ್ಲೇಟ್‌ನಂತೆ ಫ್ರೆಶ್ ಆಗಿ ಮಾಡಿಕೊಡಬೇಕು. ಅಲ್ಲದೆ ಈ ಬಿರಿಯಾನಿ ಸಂಪೂರ್ಣ ಸ್ವಚ್ಛತೆಯಿಂದ ಕೂಡಿರಬೇಕು ಎಂದು ಕೋರ್ಟ್ ಖಡಕ್ ಆಗಿ ಹೇಳಿದೆ.
ಈ ತೀರ್ಪು ಹೊರಬಂದ ಬಳಿಕ ಬಿರಿಯಾನಿ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಹೋಟೆಲ್‌ಗಳು ಗ್ರಾಹಕರ ಆರೋಗ್ಯದ ಜೊತೆ ಆಟವಾಡಿದರೆ ಕಾನೂನಿನ ಪಾಠ ಗ್ಯಾರಂಟಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ,(ಏಜೆನ್ಸೀಸ್).