ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯ ಮಾರನ್ ಅವರ ವಿವಾಹ ಸಂಭ್ರಮ ಈಗ ಸಿನಿರಂಗ ಹಾಗೂ ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ.
ಗ್ರೀಸ್ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನವಜೋಡಿ, ಇದೀಗ ತಮ್ಮ ಸಂಸ್ಥೆಯಾದ ಸನ್ ಗ್ರೂಪ್ ಉದ್ಯೋಗಿಗಳಿಗಾಗಿ ಭರ್ಜರಿ ಬಾಡೂಟದ ಔತಣಕೂಟ ಏರ್ಪಡಿಸುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಸದ್ಯ ಈ ಸಮಾರಂಭದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಾವ್ಯ ಮಾರನ್ ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿಯಾಗಿದ್ದು,ತಮ್ಮ ಮದುವೆಯ ಸಂಭ್ರಮವನ್ನು ಸಂಸ್ಥೆಯ ಪ್ರತಿಯೊಬ್ಬ ಉದ್ಯೋಗಿಯ ಜೊತೆ ಹಂಚಿಕೊಳ್ಳಲು ಮುಂದಾದ ನವದಂಪತಿ, ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯಲ್ಲಿ ಬಾಳೆ ಎಲೆಯ ಭೋಜನ ವ್ಯವಸ್ಥೆ ಮಾಡಿದ್ದರು.
ಮೆನುವಿನಲ್ಲಿ ಘಮಘಮಿಸುವ ಬಿರಿಯಾನಿ, ಫ್ರೈಡ್ ಚಿಕನ್, ಮಟನ್ ಸುಕ್ಕಾ, ಬೇಯಿಸಿದ ಮೊಟ್ಟೆ, ಈರುಳ್ಳಿ ರಾಯಿತ, ಬದನೆಕಾಯಿ ಪಲ್ಯ ಹಾಗೂ ನುಗ್ಗೆಕಾಯಿಯ ಖಾರದ ಖಾದ್ಯಗಳು ಉದ್ಯೋಗಿಗಳ ಬಾಯಲ್ಲಿ ನೀರೂರಿಸುವಂತಿದ್ದವು. ಊಟದ ಬಳಿಕ ಗುಲಾಬ್ ಜಾಮೂನ್ ಮತ್ತು ಐಸ್ ಕ್ರೀಮ್ ಸೇರಿದಂತೆ ಬಗೆಬಗೆಯ ಸಿಹಿ ತಿನಿಸುಗಳನ್ನು ಬಡಿಸಲಾಯಿತು.
ವಿಶೇಷವೆಂದರೆ, ಅನಿರುದ್ಧ್ ಮತ್ತು ಕಾವ್ಯ ಸ್ವತಃ ಅಲ್ಲಿಗೆ ಆಗಮಿಸಿ, ಪ್ರತಿಯೊಬ್ಬ ಉದ್ಯೋಗಿಗೂ ಕೈಮುಗಿದು ನಮಸ್ಕರಿಸುತ್ತಾ ಆತ್ಮೀಯವಾಗಿ ಸ್ವಾಗತಿಸಿದರು. ಬೂದು ಬಣ್ಣದ ಕುರ್ತಾ-ಪೈಜಾಮದಲ್ಲಿ ಅನಿರುದ್ಧ್ ಹಾಗೂ ಕೆಂಪು ಬಣ್ಣದ ಅನಾರ್ಕಲಿ ಸೂಟ್ನಲ್ಲಿ ಕಾವ್ಯ ಮಾರನ್ ಮಿಂಚಿದ್ದಾರೆ.
2025ರಿಂದಲೂ ಇವರಿಬ್ಬರ ಪ್ರೀತಿ ಮತ್ತು ಮದುವೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರದ ಪ್ರದರ್ಶನದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಈ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿತ್ತು. ಅಕ್ಟೋಬರ್ನಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ಇವರ ಮದುವೆಯ ಬಗ್ಗೆ ಸುಳಿವು ನೀಡಿದ್ದರು.
ಅಂತಿಮವಾಗಿ ನವೆಂಬರ್ 11ರಂದು ಗ್ರೀಸ್ನಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅನಿರುದ್ಧ್-ಕಾವ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ಹತ್ತು ದಿನಗಳ ಬಳಿಕ, ಅಂದರೆ ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಿತು, (ಏಜೆನ್ಸೀಸ್).