ಬೈಕ್​ ಟ್ಯಾಕ್ಸಿ ಸಮಸ್ಯೆ ಕುರಿತು 'ಸುಪ್ರೀಂ'ಗೆ ರಾಜ್ಯ ಸರ್ಕಾರ ಹೇಳಿದ್ದಿಷ್ಟು 
ದೇಶ

ಸುರಕ್ಷತೆ ಇಲ್ಲ, ವಿಮೆ ಕವರೇಜ್​ ಕೂಡ ಇಲ್ಲ! ಬೈಕ್​ ಟ್ಯಾಕ್ಸಿ ಸಮಸ್ಯೆ ಕುರಿತು 'ಸುಪ್ರೀಂ'ಗೆ ರಾಜ್ಯ ಸರ್ಕಾರ ಹೇಳಿದ್ದಿಷ್ಟು | Bike Taxi

ಪ್ರಮುಖ ಮುಖ್ಯಾಂಶಗಳು

  • ಬೈಕ್ ಟ್ಯಾಕ್ಸಿಗಳ ವಿರುದ್ಧ ರಾಜ್ಯ ಸರ್ಕಾರದ ಬಿಗಿ ಕ್ರಮ
  • ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ
  • ಸುರಕ್ಷತೆ, ಮಹಿಳಾ ಭದ್ರತೆ ಬಗ್ಗೆ ಸರ್ಕಾರದ ಆಕ್ಷೇಪ
  • ಬೈಕ್​ ಟ್ಯಾಕ್ಸಿ ನಿಷೇಧದಿಂದ ಸಂಚಾರ, ಮಾಲಿನ್ಯ ನಿಯಂತ್ರಣ ಸುಲಭ
ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ (Bike Taxis) ವಿರುದ್ಧ ಬಿರುಸಿನ ಕಾರ್ಯಾಚರಣೆ ಕೈಗೊಂಡಿರುವ ಸಾರಿಗೆ ಇಲಾಖೆ, ಈಗಾಗಲೇ 250ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದೆ. ಇದರ ಬೆನ್ನಲ್ಲೇ ಸರ್ಕಾರ, ಬೈಕ್​ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ನೀಡಿದ್ದ ಅನುಮತಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ವಾದಿಸಿರುವ ಸರ್ಕಾರ, ಬೈಕ್​ ಟ್ಯಾಕ್ಸಿ ಸೇವೆಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಇಂತಹ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಕೊರತೆ, ಮಹಿಳೆಯರ ಭದ್ರತೆ ಮತ್ತು ಆ್ಯಕ್ಸಿಡೆಂಟ್​ಗಳ ಅಪಾಯ ಹೆಚ್ಚಿವೆ. ಮುಖ್ಯವಾಗಿ, ಅಪಘಾತವಾದರೆ, ಹಿಂಬದಿ ಕುಳಿತಿರುವ ವ್ಯಕ್ತಿಗೆ ಯಾವುದೇ ವಿಮೆ ಕವರೇಜ್​ ಕೂಡ ಇಲ್ಲ. ಹೀಗಾಗಿ, ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್​ ಸಿಗ್ನಲ್​ ನೀಡುವುದು ಬೇಡ ಎಂದು ವಿಶೇಷ ರಜೆ ಅರ್ಜಿಯಲ್ಲಿ (SLP) ಉಲ್ಲೇಖಿಸಿದೆ.

ಪ್ರಮುಖ ವಾದಗಳು

1. ಸುರಕ್ಷತೆ ಮತ್ತು ಮಹಿಳೆಯರ ಭದ್ರತೆ: ಆಟೋ ಮತ್ತು ಕ್ಯಾಬ್‌ಗಳಲ್ಲಿ ಇರುವಂತಹ ಪ್ರಯಾಣಿಕರ ಸುರಕ್ಷತಾ ಸೌಲಭ್ಯಗಳು ಬೈಕ್‌ಗಳಲ್ಲಿ ಇಲ್ಲ. ಇದಲ್ಲದೇ, ಅಪಘಾತ ಸಂಭವಿಸಿದರೆ ಯಾವುದೇ ಇನ್ಶೂರೆನ್ಸ್ (ವಿಮೆ) ಸೌಲಭ್ಯ ಮತ್ತು ಮುಖ್ಯವಾಗಿ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಗಂಭೀರ ಸವಾಲುಗಳಿವೆ ಎಂದಿದೆ.
2. ಸಂಚಾರ ದಟ್ಟಣೆ ಮತ್ತು ಮಾಲಿನ್ಯ ನಿಯಂತ್ರಣ: ದ್ವಿಚಕ್ರ ವಾಹನಗಳ ಟ್ಯಾಕ್ಸಿ ಸೇವೆಯನ್ನು ನಿರ್ಬಂಧಿಸುವುದರಿಂದ ರಸ್ತೆ ಸಂಚಾರ ದಟ್ಟಣೆ ಹಾಗೂ ಮಾಲಿನ್ಯವನ್ನೂ ಕಂಟ್ರೋಲ್​ ಮಾಡಬಹುದು. ಜತೆಗೆ ವರ್ಷಕ್ಕೆ ಸುಮಾರು 1.39 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯನ್ನು ತಡೆಗಟ್ಟಬಹುದು ಎಂದು ತಿಳಿಸಲಾಗಿದೆ.
3. ಉದ್ಯೋಗಕ್ಕೆ ಹೊಡೆತ ಬೀಳಲ್ಲ: ಬೈಕ್ ಟ್ಯಾಕ್ಸಿ ಬ್ಯಾನ್​ನಿಂದ ಸವಾರರ ಜೀವನೋಪಾಯಕ್ಕೆ ಸಂಪೂರ್ಣ ಅಡ್ಡಿಯಾಗಲ್ಲ. ಅವರು ಇದರ ಬದಲಿಗೆ ಸ್ವಿಗ್ಗಿ, ಜೊಮ್ಯಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್‌ ಸೇರಿದಂತೆ ಹಲವು ಡೆಲಿವರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬಹುದು. ಜತೆಗೆ 2025ರ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಡಿಯಲ್ಲೂ ರಕ್ಷಣೆ ಪಡೆಯಬಹುದು ಎಂದಿದೆ.
4. ಕೇಂದ್ರ ಸರ್ಕಾರದ ಸ್ಪಷ್ಟನೆ: ಮೋಟಾರು ವಾಹನ ಕಾಯ್ದೆಯಲ್ಲಿ (Motor Vehicles Act) ಎಲ್ಲಿಯೂ 'ಬೈಕ್ ಟ್ಯಾಕ್ಸಿ' ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ ಎಂದು ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವೂ ರಾಜ್ಯಸಭೆಯಲ್ಲಿ ತಿಳಿಸಿದೆ. ಯಾವುದೇ ಸ್ಪಷ್ಟ ಕಾನೂನು ನಿಯಮಗಳಿಲ್ಲದೆ ವೈಟ್ ಬೋರ್ಡ್ ವಾಹನಗಳನ್ನು ಟ್ರಾನ್ಸ್‌ಪೋರ್ಟ್ (ಯೆಲ್ಲೋ ಬೋರ್ಡ್) ವಾಹನಗಳಾಗಿ ಪರಿವರ್ತಿಸಲು ಕಷ್ಟಸಾಧ್ಯ ಎಂದು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

ಈ ಹಿಂದೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು, ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನೀತಿ (Policy) ರಚಿಸುವವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಇದನ್ನು ಓಲಾ, ಊಬರ್, ರಾಪಿಡೋ ಹಾಗೂ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತು. ಈ ವರ್ಷದ ಜನವರಿಯಲ್ಲಿ ತೀರ್ಪು ನೀಡಿದ ವಿಭಾಗೀಯ ಪೀಠವು, ಬೈಕ್ ಟ್ಯಾಕ್ಸಿಗಳಿಗೆ ಪರ್ಮಿಟ್ ನೀಡುವುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿ, ಬೈಕ್ ಟ್ಯಾಕ್ಸಿಗಳ ಮೇಲಿದ್ದ ತಡೆಯಾಜ್ಞೆಯನ್ನು ಮುಕ್ತಗೊಳಿಸಿತು. ಆದರೀಗ, ಈ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಸಾರಿಗೆ ಇಲಾಖೆ ಹಾಗೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ,(ಏಜೆನ್ಸೀಸ್).