ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ
- ದೇಶದ ಗಮನವನ್ನು ಸೆಳೆದಿರುವ ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ
- ಪ್ರಚಂಡ ಬಹುಮತದೊಂದಿಗೆ ನಾಗಾಲೋಟ ಮುಂದುವರಿಸಿದ ಆಡಳಿತಾರೂಢ ಎನ್‌ಡಿಎ
- ಹಾಲಿ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದಿಂದ ಭರ್ಜರಿ ಪ್ರದರ್ಶನ
- ಇದೇ ಟ್ರೆಂಡ್ ಮುಂದುವರಿದರೆ ಮೈತ್ರಿಕೂಟದಿಂದ ಸರ್ಕಾರ ರಚನೆ ಗ್ಯಾರಂಟಿ
ಪಟನಾ: ಇಡೀ ದೇಶದ ಗಮನವನ್ನು ಸೆಳೆದಿರುವ ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶದ ಸ್ಪಷ್ಟ ಚಿತ್ರಣ ಇನ್ನು ಕೆಲವೇ ಕ್ಷಣಗಳಲ್ಲಿ ಸಿಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ( NDA ) ಪ್ರಚಂಡ ಬಹುಮತದೊಂದಿಗೆ ತನ್ನ ನಾಗಲೋಟವನ್ನು ಮುಂದುವರಿಸಿದೆ. ನಿತೀಶ್ ಕುಮಾರ್ ಅವರ ಜೆಡಿಯು ಭರ್ಜರಿ ಪ್ರದರ್ಶನ ನೀಡಿದೆ. ಮತ ಎಣಿಕೆಯ ಆರಂಭಿಕ ಸುತ್ತಿನಿಂದಲೂ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬೆಳಗ್ಗೆ 10.55 ರ ಹೊತ್ತಿಗೆ, ಜೆಡಿಯು ತಾನು ಸ್ಪರ್ಧಿಸಿದ 101 ಸ್ಥಾನಗಳಲ್ಲಿ 84 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದರ ಮಿತ್ರ ಪಕ್ಷ ಬಿಜೆಪಿ ಕೂಡ ಬಲವಾಗಿ ಪ್ರದರ್ಶನ ನೀಡುತ್ತಿದೆ ಮತ್ತು 80 ಸ್ಥಾನಗಳಲ್ಲಿ ಮುಂದಿದೆ. ಹೀಗಾಗಿ ಎನ್‌ಡಿಎ 185 ಕ್ಷೇತ್ರಗಳಲ್ಲಿ ಪ್ರಚಂಡ ಮುನ್ನಡೆ ಸಾಧಿಸಿದೆ. ಇದೇ ಟ್ರೆಂಡ್ ಮುಂದುವರಿದರೆ ಮೈತ್ರಿಕೂಟವು ಆರಾಮವಾಗಿ ಸರ್ಕಾರ ರಚನೆ ಮಾಡಲಿದೆ. ಇನ್ನೂ ಎಣಿಕೆಯ ಹಲವಾರು ಸುತ್ತುಗಳು ಬಾಕಿ ಉಳಿದಿವೆ. ಹೀಗಾಗಿ ಈ ಸಂಖ್ಯೆಗಳು ಯಾವಾಗ ಬೇಕಾದರೂ ಬದಲಾಗಬಹುದು.
ಇನ್ನು ವಿಪಕ್ಷಗಳ ವಿಚಾರಕ್ಕೆ ಬಂದರೆ, ಆರ್‌ಜೆಡಿ 37 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ಚುನಾವಣೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹೆಚ್ಚಾಗಿ ಪ್ರಚಾರ ಮಾಡಲಾದ ಪ್ರಶಾಂತ್ ಕಿಶೋರ್ ಅವರ ಜಾನ್ ಸುರಾಜ್ ಪಕ್ಷವು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಮುಂದಿದೆ. ಜೆಡಿಯುನ ಪ್ರಬಲ ಪ್ರದರ್ಶನವು ಬಿಹಾರದ ರಾಜಕೀಯ ಇತಿಹಾಸದಲ್ಲೇ ಒಂದು ಹೊಸ ಮೈಲುಗಲ್ಲು ಸ್ಥಾಪಿಸುವ ನಿರೀಕ್ಷೆ ಇದೆ.
ನಿತೀಶ್ ಕುಮಾರ್ ಅವರ ಜನಪ್ರಿಯತೆ ಮತ್ತು ಆಡಳಿತವು ದಾಖಲೆಯು 20 ವರ್ಷಗಳ ನಂತರವೂ ಮತ ಸೆಳೆಯುವ ಸಾಮರ್ಥ್ಯವನ್ನು ಉಳಿಸಿಕೊಂಡಿದೆ ಎಂಬುದನ್ನು ಈ ಫಲಿತಾಂಶ ಸ್ಪಷ್ಟವಾಗಿ ತೋರಿಸುತ್ತಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಯು ದುರ್ಬಲ ಶಕ್ತಿಯಾಗಿ ಕಾಣುತ್ತಿದ್ದ ಸಮಯದಲ್ಲಿಯೇ ಅದರ ಪ್ರಬಲ ಪ್ರದರ್ಶನವೂ ಈ ಚುನಾವಣೆಯಲ್ಲಿ ಕಾಣುತ್ತಿದೆ. ಒಂದು ವೇಳೆ ಜೆಡಿಯು ಏಕೈಕ ಅತಿದೊಡ್ಡ ಪಕ್ಷವಾಗಿ ಸ್ಥಾನ ಪಡೆದರೆ, ಅದು 2005 ಮತ್ತು 2010 ರ ಚುನಾವಣೆಗಳ ಫಲಿತಾಂಶವನ್ನು ಪುನರಾವರ್ತಿಸಲಿದೆ.
ಇದರ ನಡುವೆ ನಿತೀಶ್ ಕುಮಾರ್ ಅವರ ಆರೋಗ್ಯ ಸ್ಥಿತಿಯನ್ನು ಮುಂದಿಟ್ಟು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ತಿಯನ್ನಾಗಿ ಘೋಷಿಸಿ, ಜನರ ಮುಂದೆ ಹೋಗಿದ್ದ ಮಹಾಘಟಬಂಧನ್ ಭಾರಿ ವಿಫಲವಾಗಿದೆ ಎಂಬುದನ್ನು ಸದ್ಯ ಟ್ರೆಂಡ್ ತೋರಿಸುತ್ತಿದೆ.
ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, 10 ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದಂತಾಗುತ್ತದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಮತ್ತೊಂದು ದೊಡ್ಡ ಲಾಭ ಗಳಿಸಿದ ಪಕ್ಷವೆಂದರೆ, ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್). ಸೀಟು ಹಂಚಿಕೆಗಾಗಿ ಭಾರಿ ಚೌಕಾಶಿ ಮಾಡಿದ್ದ ಕೇಂದ್ರ ಸಚಿವರು ಈಗ ತಮ್ಮ ಪಕ್ಷವನ್ನು ಅದ್ಭುತ ಪ್ರದರ್ಶನದತ್ತ ಕೊಂಡೊಯ್ಯುತ್ತಿದ್ದಾರೆ. ಎಲ್‌ಜೆಪಿ (ಆರ್‌ವಿ) ಸ್ಪರ್ಧಿಸಿದ 28 ಸ್ಥಾನಗಳಲ್ಲಿ, ಅದು 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ಸಂಖ್ಯೆಗಳು ಹಾಗೇ ಇದ್ದರೆ, ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ 5/5 ಅಂಕಗಳನ್ನು ಗಳಿಸಿದ ಪಾಸ್ವಾನ್‌ಗೆ ಇದು ಮತ್ತೊಂದು ದೊಡ್ಡ ಗೆಲುವಾಗಿರುತ್ತದೆ. (ಏಜೆನ್ಸೀಸ್)