ಕಚ್ಚಿದ ಹಾವನ್ನೇ ಜೀವಂತವಾಗಿ ಆಸ್ಪತ್ರೆಗೆ ಹೊತ್ತು ತಂದ ಯುವಕ! (Snake Bite ಚಿತ್ರ Instagram)
ಬಿಹಾರ: ಹಾವು ಕಚ್ಚಿದರೆ ಸಾಕು ಎಂಥವರಾದರೂ ಎದೆಗುಂದಿ ತಲ್ಲಣಗೊಳ್ಳುತ್ತಾರೆ. ಆದರೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ವೈದ್ಯರು ಹಾಗೂ ಸಾರ್ವಜನಿಕರನ್ನು ಬೆರಗುಗೊಳಿಸಿದೆ. ವಿಷಪೂರಿತ ಹಾವಿನ ಮರಿ ಕಚ್ಚಿದರೂ (Snake Bite)ಧೈರ್ಯಗೆಡದ ಯುವಕನೊಬ್ಬ, ಅದೇ ಹಾವನ್ನು ಡಬ್ಬಿಯಲ್ಲಿ ಹಿಡಿದುಕೊಂಡು ನೇರವಾಗಿ ಆಸ್ಪತ್ರೆಗೆ ಹೊತ್ತು ತಂದ ಅಪರೂಪದ ಘಟನೆ ನಡೆದಿದೆ.
ಏನಿದು ಪ್ರಕರಣ?
ಪೂರ್ವ ಚಂಪಾರಣ್ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಬಾಧಿತ ಯುವಕನನ್ನು ನಿರ್ಭಯ್ ಕುಮಾರ್ ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ನಿರ್ಭಯ್ ನಾಗರಹಾವಿನ ಸಣ್ಣ ಮರಿಯೊಂದನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವೇಳೆ ಈ ಆತನಿಗೆ ಕಚ್ಚಿದೆ.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಜನರು ಗಾಬರಿಯಿಂದ ಓಡುವುದನ್ನು ಗಮನಿಸಿರುತ್ತೇವೆ. ಆದರೆ, ನಿರ್ಭಯ್ ತನಗೆ ಕಚ್ಚಿದ ಹಾವನ್ನು ಕ್ಷಣಾರ್ಧದಲ್ಲಿ ಹಿಡಿದು ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಭದ್ರಪಡಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸಿದ್ದಾರೆ.
ಆದಾಗ್ಯೂ, ಆಸ್ಪತ್ರೆಗೆ ಬಂದ ಯುವಕನಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡಲು ಆರಂಭಿಸಿದರು. ಈ ವೇಳೆ ತನಗೆ ಕಚ್ಚಿದ ಹಾವು ಯಾವುದೆಂದು ತೋರಿಸಲು ನಿರ್ಭಯ್ ತಂದಿದ್ದ ಡಬ್ಬಿಯ ಮುಚ್ಚಳವನ್ನು ಸಾರ್ವಜನಿಕರ ನಡುವೆಯೇ ತೆರೆದಿದ್ದಾನೆ. ಜೀವಂತವಾಗಿದ್ದ ಹಾವನ್ನು ಕಂಡ ತಕ್ಷಣ ಆಸ್ಪತ್ರೆಯ ವಾರ್ಡ್ನಲ್ಲಿದ್ದ ರೋಗಿಗಳು ಮತ್ತು ಕುಟುಂಬಸ್ಥರು ದಿಕ್ಕಾಪಾಲಾಗಿ ಓಡಿದ್ದಾರೆ.
ಸ್ಥಳದಲ್ಲಿದ್ದ ವೈದ್ಯರು ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸಿದ್ದು, ಯುವಕನಿಗೆ ತಕ್ಷಣವೇ ಚಿಕಿತ್ಸೆ ನೀಡಿದ್ದಾರೆ. ಪ್ರಸ್ತುತ ಯುವಕ ಚೇತರಿಸಿಕೊಂಡಿದ್ದು, ಮುನ್ನೆಚ್ಚರಿಕೆಯಾಗಿ 12 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಯುವಕ ತೋರಿದ ಸಮಯಪ್ರಜ್ಞೆ ಮತ್ತು ಸಾಹಸವನ್ನು ಜನರು ಮೆಚ್ಚಿಕೊಂಡಿದ್ದರೂ, ವೈದ್ಯರು ಇಂತಹ ಸಾಹಸ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಘಟನೆ ಬಗ್ಗೆ ವೈದ್ಯರು ಹೇಳಿದ್ದೇನು?
ಹಾವು ಕಚ್ಚಿದಾಗ ಅದನ್ನು ಹಿಡಿಯಲು ಅಥವಾ ವಶಕ್ಕೆ ಪಡೆಯಲು ಯತ್ನಿಸುವುದು ಮತ್ತಷ್ಟು ಅಪಾಯ ತರಬಹುದು. ಹಾವು ಮತ್ತೆ ಕಚ್ಚುವ ಸಾಧ್ಯತೆ ಇರುತ್ತದೆ ಮತ್ತು ಸುತ್ತಮುತ್ತಲಿನ ಇತರರಿಗೂ ಅಪಾಯ ಉಂಟಾಗುತ್ತದೆ. ಆದ್ದರಿಂದ ಹಾವು ಕಚ್ಚಿದ ತಕ್ಷಣ ಸಮಯ ವ್ಯರ್ಥ ಮಾಡದೆ ಬಾಧಿತರನ್ನು ಹತ್ತಿರದ ಆಸ್ಪತ್ರೆಗೆ ತಲುಪಿಸುವುದೇ ಪ್ರಥಮ ಕರ್ತವ್ಯವಾಗಬೇಕು ಎಂದು ವೈದ್ಯರು ತಿಳಿಸಿದ್ದಾರೆ (ಏಜೆನ್ಸೀಸ್).