Bihar Assembly Session | ಬಿಹಾರದ ಹೊಸ ಸರ್ಕಾರದ ಮೊದಲ ಅಧಿವೇಶನ  
ದೇಶ

Bihar Assembly Session | ಬಿಹಾರ ವಿಧಾನಸಭೆ ಅಧಿವೇಶನಕ್ಕೆ ಚಾಲನೆ; ಪ್ರಮಾಣವಚನ ಸ್ವೀಕರಿಸಿದ ನೂತನ ಶಾಸಕರು

ಪಟನಾ: ಬಿಹಾರದ ಹೊಸ ಸರ್ಕಾರದ ಮೊದಲ ಅಧಿವೇಶನ ಇಂದು ಆರಂಭವಾಗಿದ್ದು, ಹಂಗಾಮಿ ಸ್ಪೀಕರ್ ನರೇಂದ್ರ ನಾರಾಯಣ್ ಯಾದವ್ ನೂತನ ಶಾಸಕರುಗಳಿಗೆ ಪ್ರಮಾಣ ವಚನ ಬೋಧಿಸುವ ಮೂಲಕ ಕಲಾಪಕ್ಕೆ ಚಾಲನೆ ನೀಡಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.
ಹೊಸ ಸರ್ಕಾರ ರಚನೆಯ ಬಳಿಕ ಅಗತ್ಯವಿರುವ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಈ ಚಳಿಗಾಲದ ಅಧಿವೇಶನವನ್ನು ಪ್ರಾಥಮಿಕವಾಗಿ ಕರೆಯಲಾಗಿದ್ದು. ಕಲಾಪವು ಪ್ರಮಾಣ ವಚನ ಸ್ವೀಕಾರದೊಂದಿಗೆ ಪ್ರಾರಂಭವಾಗಿ, ರಾಜ್ಯಪಾಲರ ಭಾಷಣ ಮತ್ತು ಅದರ ಮೇಲಿನ ಚರ್ಚೆಗಾಗಿ ಎರಡೂ ಸದನಗಳ ಜಂಟಿ ಸಭೆ ನಡೆಯಲಿದೆ. ಪ್ರಸ್ತುತ ಅಧಿವೇಶನವು ವಿಧಾನಸಭೆ ಪ್ರಕ್ರಿಯೆಗಳ ಸಂಪೂರ್ಣ ಡಿಜಿಟಲೀಕರಣ ಮತ್ತು ಹೊಸ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸುವ ಕುರಿತಾದ ಚರ್ಚೆ ಸೇರಿದಂತೆ ಸರ್ಕಾರದ ನೂತನ ಯೋಜನೆಗಳ ಜಾರಿಯ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ. ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ತೇಜಸ್ವಿ ಯಾದವ್, ಸದನವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕಾಗದರಹಿತ ಕಲಾಪಕ್ಕೆ ನಿರ್ಧಾರ...

ಬಿಹಾರ ವಿಧಾನಸಭೆಯು ಈ ಅಧಿವೇಶನವನ್ನು ಸಂಪೂರ್ಣವಾಗಿ ಡಿಜಿಟಲ್ ಮೋಡ್‌ನಲ್ಲಿ ನಡೆಸುವ ಗುರಿ ಹೊಂದಿರುವ ಸರ್ಕಾರ, ಎಲ್ಲಾ ದಾಖಲೆಗಳು, ಚರ್ಚೆಗಳು ಮತ್ತು ಕಲಾಪಗಳು ಕಾಗದರಹಿತವಾಗರುತ್ತವೆ ಎಂದು ನಿರೀಕ್ಷಿಸಲಾಗಿದೆ. ಇದು ಶಾಸಕಾಂಗ ಕಾರ್ಯಚಟುವಟಿಕೆಯನ್ನು ಆಧುನೀಕರಿಸುವತ್ತ ಪ್ರಮುಖ ಬದಲಾವಣೆಯನ್ನು ದೃಢಪಡಿಸುತ್ತದೆ. ಇನ್ನು ಮುಂದೆ ವಿಧಾನಸಭೆಯ ಕಲಾಪದಲ್ಲಿ ಶಾಸಕರುಗಳು ಟ್ಯಾಬ್ಲೆಟ್‌ಗಳನ್ನು ಬಳಸಿಕೊಂಡು ಪ್ರಶ್ನೆ ಕೇಳಲು ಅವಕಾಶ ನೀಡುವುದು ಮತ್ತು ಡಿಜಿಟಲ್ ಮೈಕ್ರೊಫೋನ್‌ಗಳನ್ನು ಬಳಸುವಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಇದು ಒಳಗೊಂಡಿದೆ.

ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆ

ವಿಧಾನಸಭೆಗೆ ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆಯೂ ಇಂದು ಆರಂಭವಾಗಲಿದ್ದು, ಡಿಸೆಂಬರ್ 2 ರಂದು ಚುನಾವಣೆ ನಡೆಯಲಿದೆ, ಡಿಸೆಂಬರ್ 3 ರಂದು ವಿಧಾನಸಭೆಯ ಅನೆಕ್ಸ್ ಕಟ್ಟಡದ ಕೇಂದ್ರ ಸಭಾಂಗಣದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸದನದಲ್ಲಿ ವಿಪಕ್ಷ ಶಾಸಕರ ಸಂಖ್ಯೆ ಕಡಿಮೆ ಇರುವುದರಿಂದ ಮಹಾಘಟಬಂಧನ್ ಸ್ಪೀಕರ್ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ. ನೂತನ ಸಭಾಧ್ಯಕ್ಷರಾಗಿ ಆಗಿ ಬಿಜೆಪಿಯ ಪ್ರೇಮ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 202 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿ ಎನ್‌ಡಿಎ ಮೈತ್ರಿ ಕೂಟವಿದ್ದರೆ, ಹೀನಾಯ ಸೋಲನುಭವಿಸಿರುವ ಮಹಾಮೈತ್ರಿಕೂಟದ ಧ್ವನಿ ಕ್ಷೀಣಿಸುವುದರಲ್ಲಿ ಅನುಮಾನವಿಲ್ಲ(ಏಜೆನ್ಸೀಸ್​).