Bihar Election | ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್
ಪಟನಾ: ಜನ ಸುರಾಜ್ ಪಕ್ಷದ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ವಶದಲ್ಲಿರುವ ಮೊಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್, 28,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಅನಂತ್ ಸಿಂಗ್ 91,416 ಮತ ಗಳಿಸಿದ್ದು, ಆರ್ಜೆಡಿ ಅಭ್ಯರ್ಥಿ ವೀಣಾದೇವಿ 63,210 ಮತಗಳನ್ನು ಪಡೆದಿದ್ದಾರೆ.
ಜೈಲಿನಲ್ಲಿರುವ ಜೆಡಿ(ಯು) ನಾಯಕ ಸಿಂಗ್, ಐದು ಬಾರಿ ಮೊಕಾಮಾ ಕ್ಷೇತ್ರದಿಮದ ಗೆಲುವು ಸಾಧಿಸಿದ್ದಾರೆ. 2005 ರಲ್ಲಿ ಜೆಡಿ(ಯು) ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಐದು ವರ್ಷಗಳ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾತೃ ಪಕ್ಷವಾಗಿದ್ದ ಜೆಡಿ(ಯು) ಅಭ್ಯರ್ಥಿಯನ್ನೇ ಸೋಲಿಸಿದರು. 2020 ರ ಚುನಾವಣೆಗೆ ಮತ್ತೆ ಮನ ಬದಲಿಸಿದ ಸಿಂಗ್ ಆರ್‌ಜೆಡಿಗೆ ಸೇರ್ಪಡೆಗೊಂಡು ಗೆಲುವು ಸಾಧಿಸಿದರು.
ಅನಂತ್ ಸಿಂಗ್ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳಿದ್ದು, ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಕಾರಣ ತಮ್ಮ ಸ್ಥಾನ ಕಳೆದುಕೊಂಡ ಸಿಂಗ್, ಉಪಚುನಾವಣೆಯಲ್ಲಿ ತಮ್ಮ ಪತ್ನಿ ನೀಲಂ ದೇವಿ ನಿಲ್ಲಿಸಿ ಮೊಕಾಮಾ ಕ್ಷೇತ್ರವನ್ನು ಉಳಿಸಿಕೊಂಡರು. ಇದೇ ನವೆಂಬರ್ 2 ರಂದು ಜನ್ ಸುರಾಜ್ ಪಕ್ಷದ ಕಾರ್ಯಕರ್ತ ದುಲಾರ್ ಸಿಂಗ್ ಯಾದವ್ ಕೊಲೆಗೆ ಸಂಬಂಧಿಸಿದಂತೆ ಅನಂತ್ ಸಿಂಗ್ರನ್ನು ಬಂಧಿಸಲಾಗಿತ್ತು. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾಗ ಯಾದವ್ರನ್ನು ಗುಂಡು ಹಾರಿಸಿ ಮಾರಣಾಂತಿಕವಾಗಿ ಕೊಲ್ಲಲಾಯಿತು ಎಂದು ವರದಿಯಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಎನ್ಡಿಎ ಎಲ್ಲರ ನಿರೀಕ್ಷೆ ಮೀರಿ ಬಹುಮತ ಗಳಿಸುವತ್ತ ದಾಪುಗಾಲಿಡುತ್ತಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ಮುಂದುವರೆದಿದೆ(ಏಜೆನ್ಸೀಸ್).