ಇನ್ಮುಂದೆ ಈ ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಜೀನ್ಸ್​, ಟೀ-ಶರ್ಟ್ ಬ್ಯಾನ್​​! ಫಾರ್ಮಲ್ ಉಡುಗೆ ಕಡ್ಡಾಯವೆಂದ ಶಿಕ್ಷಣ ಇಲಾಖೆ | Dress Code  
ದೇಶ

ಇನ್ಮುಂದೆ ಈ ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಜೀನ್ಸ್​, ಟೀ-ಶರ್ಟ್ ಬ್ಯಾನ್​​! ಫಾರ್ಮಲ್ ಉಡುಗೆ ಕಡ್ಡಾಯವೆಂದ ಶಿಕ್ಷಣ ಇಲಾಖೆ | Dress Code

ಪಾಟ್ನಾ: ಬಿಹಾರದ ಎಲ್ಲ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಶಿಕ್ಷಣ ಇಲಾಖೆಯು ಹೊಸ ಶಿಸ್ತಿನ ನಿಯಮಗಳನ್ನು ಜಾರಿಗೊಳಿಸಿದೆ. ಶಾಲೆಗೆ ಆಗಮಿಸುವ ಶಿಕ್ಷಕರು ಹಾಗೂ ಸಿಬ್ಬಂದಿ ಇನ್ಮುಂದೆ ಕಡ್ಡಾಯವಾಗಿ ಫಾರ್ಮಲ್ ಉಡುಗೆಯಲ್ಲೇ ಕರ್ತವ್ಯಕ್ಕೆ ಹಾಜರಾಗಬೇಕಿದ್ದು, ಜೀನ್ಸ್ ಹಾಗೂ ಟೀ-ಶರ್ಟ್ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ನಿಯಮವನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ (ಡಿಇಓ) ಸೂಚನೆ ನೀಡಲಾಗಿದೆ ಎಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಿ.ಕೆ. ಅನಿಲ್ ಆದೇಶ ಹೊರಡಿಸಿ ಸ್ಪಷ್ಟಪಡಿಸಿದ್ದಾರೆ. ನಿಯಮಗಳಲ್ಲಿ ದಿಢೀರ್ ಬದಲಾವಣೆಗೆ ಅನಿಲ್​ ಅವರ ನೂತನ ಜವಾಬ್ದಾರಿಯೇ ಮುಖ್ಯ ಕಾರಣ ಎನ್ನಲಾಗಿದೆ. ಬಿಹಾರ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ಎಸಿಎಸ್​) ಅಧಿಕಾರ ವಹಿಸಿಕೊಂಡ ತಕ್ಷಣವೇ ಸಿ.ಕೆ. ಅನಿಲ್ ಈ ಹೊಸ ಕಟ್ಟುನಿಟ್ಟಿನ ನಿರ್ದೇಶನವನ್ನು ಹೊರಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ರಾಜ್ಯದ ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಅಧಿಕೃತ ಸುತ್ತೋಲೆಯನ್ನೂ ರವಾನಿಸಲಾಗಿದೆ.

ಶಾಲೆಯಲ್ಲಿ ಜೀನ್ಸ್-ಟೀ ಶರ್ಟ್‌ಗೆ ನೋ ಎಂಟ್ರಿ

ಹೊಸ ನಿಯಮಾವಳಿಗಳ ಪ್ರಕಾರ, ಶಾಲಾ ಅವಧಿಯಲ್ಲಿ ಮತ್ತು ಆವರಣದಲ್ಲಿ ಶಿಕ್ಷಕರು ಹಾಗೂ ಇತರ ಸಿಬ್ಬಂದಿಗಳು ಕಡ್ಡಾಯವಾಗಿ ಫಾರ್ಮಲ್ ವಸ್ತ್ರಗಳನ್ನು ಧರಿಸಬೇಕು. ಶಾಲಾ ಆವರಣದಲ್ಲಿ ಜೀನ್ಸ್, ಟೀ-ಶರ್ಟ್ ಅಥವಾ ಇನ್ನಿತರ ಕ್ಯಾಶುಯಲ್ ಉಡುಪುಗಳನ್ನು ಧರಿಸಿ ಬಂದರೆ ಅಂಥವರನ್ನು ಒಳಗೆ ಸೇರಿಸುವುದಿಲ್ಲ. ಜತೆಗೆ ನಿಯಮ ಮುರಿಯುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಡಿಜೆ, ಡಿಸ್ಕೋ ಪಾರ್ಟಿಗಳಿಗೆ ಸಂಪೂರ್ಣ ನಿಷೇಧ

ಶಾಲೆಗಳ ಆವರಣದಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ತರುವಂತಹ ಡಿಜೆ, ಡಿಸ್ಕೋ ಸೇರಿದಂತೆ ಯಾವುದೇ ಅನುಚಿತ ಕಾರ್ಯಕ್ರಮಗಳು ಅಥವಾ ಪಾರ್ಟಿಗಳನ್ನು ಆಯೋಜಿಸುವುದನ್ನು ಇಲಾಖೆ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿಯೂ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮುಖ್ಯವಾಗಿ, ಈ ಕಟ್ಟುನಿಟ್ಟಿನ ನಿಯಮಗಳು ಶಾಲೆಯ ಸಂಗೀತ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಯಾವುದೇ ತಡೆಯೊಡ್ಡುವುದಿಲ್ಲ. ಶೈಕ್ಷಣಿಕ ವೇಳಾಪಟ್ಟಿಯಲ್ಲಿ ನಿಗದಿಪಡಿಸಲಾದ ಸಾಂಪ್ರದಾಯಿಕ ಸಂಗೀತ ಕಲಿಕೆ, ವಾದ್ಯಗಳ ಬಳಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಗದಿತ ಶಿಸ್ತಿನ ಚೌಕಟ್ಟಿನೊಳಗೆ ನಡೆಸಲು ಸಂಪೂರ್ಣ ಸಮ್ಮತಿ ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).