ಖಾಕಿಯ ಪೋಲಿ ಆಟ ಬಯಲು: ಸಂಬಳಕ್ಕಿಂತ ಲಂಚವೇ ಹೆಚ್ಚು, ಪತ್ನಿಗಿಂತ ಗೆಳತಿಯೇ ಕುಬೇರಿ, ಕೆಲಸದಾಕೆಗೂ ಲಕ್ಸುರಿ ಲೈಫ್! Bihar DSP Gautam Kumar
- ಬಿಹಾರದ ಈ ಪೊಲೀಸ್ ಸಾಹೇಬನ ಕಥೆ ಕೇಳಿದ್ರೆ ಶಾಕ್ ಆಗ್ತೀರಾ
- ಖಾಕಿ ಕಟ್ಟಿದ ಮಯಾ ಲೋಕದಲ್ಲಿ ಪತ್ನಿಗಿಂತ ಪ್ರೇಯಸಿಯೇ ಕುಬೇರಿ
- ಕೆಲಸದಾಕೆಗೂ ಲಕ್ಸುರಿ ಲೈಫ್, ಮುಸ್ಲಿಂ ಪ್ರೇಯಸಿ ಹೆಸರಲ್ಲಿ ಅರಮನೆಯಂತಹ ಆಸ್ತಿ
- ಒಬ್ಬ ಅಧಿಕಾರಿಯ 100 ಕೋಟಿಯ ಭ್ರಷ್ಟಾಟದ ಕರಾಳ ಮುಖ ಬಯಲು
Bihar DSP Gautam Kumar : ಸರ್ಕಾರಿ ಕೆಲಸ ಸಿಕ್ಕರೆ ಸಾಕು, ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ತಲೆಮಾರುಗಳವರೆಗೆ ಕೂತು ತಿನ್ನುವಷ್ಟು ಹಣ ಗಳಿಸಬಹುದು ಎಂದು ಹಲವರು ನಂಬುತ್ತಾರೆ. ಕೆಲವು ಭ್ರಷ್ಟ ನೌಕರರೇ ಇದಕ್ಕೆ ಸಾಕ್ಷಿ. ಇತ್ತೀಚೆಗೆ, ಬಿಹಾರದ ಪೊಲೀಸ್ ಅಧಿಕಾರಿಯೊಬ್ಬರ ಅಕ್ರಮ ಆದಾಯವನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮಾಡಿರುವುದು ಮಾತ್ರವಲ್ಲದೆ, ತಮ್ಮ ಮುಸ್ಲಿಂ ಗೆಳತಿಗೂ ಆಸ್ತಿ ಮಾಡಿದ್ದಾರೆ. ಅದು ಸಾಲು ಎನ್ನುವಂತೆ ತಮ್ಮ ಮನೆಯ ಕೆಲಸದಾಕೆಯ ಹೆಸರಿನಲ್ಲೂ ಅಕ್ರಮ ಆಸ್ತಿಗಳನ್ನು ಮಾಡಿದ್ದಾರೆ. ಭ್ರಷ್ಟಾಚಾರದ ಮೂಲಕ ಈ ಅಧಿಕಾರಿ ಗಳಿಸಿದ ಮೊತ್ತವು ಅವರ ಸಂಬಳಕ್ಕಿಂತ 60 ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ.
ಬಿಹಾರದ ಕಿಶನ್‌ಗಂಜ್‌ನಲ್ಲಿ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಡಿಎಸ್‌ಪಿ) ಆಗಿ ಕಾರ್ಯನಿರ್ವಹಿಸುತ್ತಿರುವ ಗೌತಮ್ ಕುಮಾರ್ ಅವರ ಮನೆ ಮೇಲೆ ಆರ್ಥಿಕ ಅಪರಾಧಗಳ ಘಟಕ (ಇಒಯು) ಇತ್ತೀಚೆಗೆ ದಾಳಿ ನಡೆಸಿತು. ಈ ವೇಳೆ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಈ ದಾಳಿಗಳು ಮಾರ್ಚ್ 31 ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿವರಗಳು ಇತ್ತೀಚೆಗೆ ಬಹಿರಂಗಗೊಂಡಿವೆ. ಇದೀಗ ಈ ಸುದ್ದಿ ಬಿಹಾರ ರಾಜ್ಯಾದ್ಯಂತ ಭಾರಿ ತಲ್ಲಣವನ್ನು ಸೃಷ್ಟಿ ಮಾಡಿದೆ.
ಅಂದಹಾಗೆ, ಭ್ರಷ್ಟ ಗೌತಮ್ ಕುಮಾರ್ ಬಿಹಾರ, ನೋಯ್ಡಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅಕ್ರಮವಾಗಿ ಆಸ್ತಿಗಳನ್ನು ಸಂಪಾದಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ 36 ಆಸ್ತಿಗಳು, ದುಬಾರಿ ಆಭರಣಗಳು ಮತ್ತು ಕೈಗಡಿಯಾರಗಳನ್ನು ಖರೀದಿಸಿದ್ದಾರೆ. ಇವುಗಳ ಮೌಲ್ಯ ಸುಮಾರು 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ಟಾರೆ, ಈತನ ಬಳಿ 100 ಕೋಟಿ ರೂ. ಆಸ್ತಿ ಇದೆ. ಇಲ್ಲಿ ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ಅವರು ತಮ್ಮ ಕುಟುಂಬ ಸದಸ್ಯರಿಗಾಗಿ ಮಾತ್ರವಲ್ಲದೆ, ತಮ್ಮ ಮನೆಯ ಕೆಲಸದಾಕೆ ಮತ್ತು ತನ್ನ ಗೆಳತಿಯ ಹೆಸರಿನಲ್ಲಿಯೂ ಭಾರಿ ಅಕ್ರಮ ಆಸ್ತಿಗಳನ್ನು ಸಂಗ್ರಹಿಸಿದ್ದಾರೆ.
ಶನಿವಾರ ಇಒಯು ಅಧಿಕಾರಿಗಳು ಗೌತಮ್ ಕುಮಾರ್ ಅವರ ಅಧಿಕೃತ ನಿವಾಸದಲ್ಲಿ ಕೆಲಸ ಮಾಡುವ ಪಾರೋ ಎಂಬ ಮಹಿಳೆಯ ಮನೆಯನ್ನು ಶೋಧಿಸಿದಾಗ ಇನ್ನಷ್ಟು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಪಾರೋ ಎಂಬಾಕೆ ಪಶ್ಚಿಮ ಬಂಗಾಳದ ಮಾಲ್ಡಾದವರು. ಆಕೆ ಉತ್ತರ ದಿನಾಜ್‌ಪುರದಲ್ಲಿ 1 ಕೋಟಿ ರೂ. ಮೌಲ್ಯದ ಬಂಗಲೆ ಹೊಂದಿದ್ದಾರೆ. ಆಕೆ, ಡಿಎಸ್‌ಪಿ ಮನೆಯಲ್ಲಿ ಕೆಲಸ ಮಾಡುತ್ತಾಳೆ. ಅಚ್ಚರಿ ಸಂಗತಿ ಏನೆಂದರೆ, ಆಕೆಯ ಬಳಿ 35 ಲಕ್ಷ ರೂ. ಮೌಲ್ಯದ ಥಾರ್ ವಾಹನ ಕೂಡ ಇದೆ. ಪಾರೋ ಅವರ ಮನೆಯಲ್ಲಿ ನಡೆಸಿದ ಶೋಧದ ಸಮಯದಲ್ಲಿ 6 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಪತ್ತೆಯಾಗಿದೆ. ಆಕೆ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲೂ ತುಂಬಾ ಸಕ್ರಿಯರಾಗಿದ್ದಾರೆ.
ಇನ್ನೂ ಗೌತಮ್ ಕುಮಾರ್, ಪಶ್ಚಿಮ ಬಂಗಾಳದ ಪೂರ್ಣಿಯಾದಲ್ಲಿ 4 ಅಂತಸ್ತಿನ ಐಷಾರಾಮಿ ಕಟ್ಟಡ, ಒಂದು ಫಾರ್ಮ್‌ಹೌಸ್ ಮತ್ತು ನೋಯ್ಡಾ ಮತ್ತು ಗುರುಗ್ರಾಮ್‌ನಲ್ಲಿ ಫ್ಲಾಟ್‌ಗಳನ್ನು ಹೊಂದಿದ್ದಾರೆ. ಗೌತಮ್ ಕುಮಾರ್ ಅವರ ಪತ್ನಿ ರೂಬಿ ಕಶ್ಯಪ್ ಕೂಡ ಸರ್ಕಾರಿ ಶಿಕ್ಷಕಿ. ಅವರು ಕೂಡ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಗೌತಮ್ ಕುಮಾರ್ ಅವರ ಗೆಳತಿ ಕೂಡ ಐಷಾರಾಮಿ ಜೀವನಶೈಲಿಯನ್ನು ಆನಂದಿಸುತ್ತಿದ್ದಾರೆಂದು ಹೇಳಲಾಗುತ್ತದೆ.
ಅಂದಹಾಗೆ, ಗೌತಮ್ ಕುಮಾರ್ ಅವರು 1994 ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದರು. ಆ ಸಮಯದಲ್ಲಿ, ಅವರ ಏಕೈಕ ಆಸ್ತಿ ಪಾಟ್ನಾದಲ್ಲಿರುವ ಅವರ ಪೂರ್ವಜರ ಮನೆಯಾಗಿತ್ತು. ಇಂದು, ಅವರು 100 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಹೊಂದಿದ್ದಾರೆ. ಅವರು ತಮ್ಮ ಪತ್ನಿ ರೂಬಿ ಕಶ್ಯಪ್‌ಗಿಂತ ತಮ್ಮ ಗೆಳತಿ ಶಗುಫ್ತಾ ಶಮೀಮ್ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸುತ್ತಾರೆ ಎಂದು ಹೇಳಲಾಗಿದೆ.
ಸದ್ಯ ಗೌತಮ್ ಕುಮಾರ್ ವಿರುದ್ಧದ ತನಿಖೆ ನಡೆಯುತ್ತಿದೆ. ತಮ್ಮ 32 ವರ್ಷಗಳ ಸೇವೆಯಲ್ಲಿ ತಮ್ಮ ಸಂಬಳಕ್ಕಿಂತ ಕನಿಷ್ಠ 60 ರಷ್ಟು ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ, (ಏಜೆನ್ಸೀಸ್).