ಬಿಸಿಲಿನಲ್ಲಿ ಬಳಲುತ್ತಿದ್ದ ಪೊಲೀಸ್ ಸಿಬ್ಬಂದಿಗೆ ತಂಪು ಪಾನೀಯ ನೀಡಿ ಗೌರವಿಸಿದ ಯುವಕ! Viral Video (ಚಿತ್ರ X) 
ದೇಶ

ಬಿಸಿಲಿನಲ್ಲಿ ಬಳಲುತ್ತಿದ್ದ ಪೊಲೀಸ್ ಸಿಬ್ಬಂದಿಗೆ ತಂಪು ಪಾನೀಯ ನೀಡಿ ಗೌರವಿಸಿದ ಯುವಕ: ವಿಡಿಯೋ ವೈರಲ್! Viral Video

ಪ್ರಮುಖ ಮುಖ್ಯಾಂಶಗಳು

  • ಸುಡುವ ಬಿಸಿಲಿನಲ್ಲಿಯೂ ಸಾರ್ವಜನಿಕರ ರಕ್ಷಣೆಗಾಗಿ ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಪೊಲೀಸರು
  • ಬಿಹಾರದ ಯುವಕನೊಬ್ಬ ಅವರಿಗೆ ತಂಪು ಪಾನೀಯ ನೀಡಿ ಗೌರವಿಸಿದ ಹೃದಯಸ್ಪರ್ಶಿ ಘಟನೆ
  • ಸುಡುವ ಬಿಸಿಲಿನಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ತಂಪು ಪಾನೀಯ ನೀಡಿದ ಸಮೀರ್

ಬಿಹಾರ: ಸುಡುವ ಬಿಸಿಲಿನಲ್ಲಿಯೂ ಸಾರ್ವಜನಿಕರ ರಕ್ಷಣೆಗಾಗಿ ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಪೊಲೀಸರ ಶ್ರಮವನ್ನು ಗುರುತಿಸಿ, ಬಿಹಾರದ ಯುವಕನೊಬ್ಬ ಅವರಿಗೆ ತಂಪು ಪಾನೀಯ ನೀಡಿ ಗೌರವಿಸಿದ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. 

ಕ್ಯಾಮೆರಾ ನೋಡಿ ಕುತೂಹಲಗೊಂಡ ಪೊಲೀಸ್ ಸಿಬ್ಬಂದಿ

ರಸ್ತೆಯಲ್ಲಿ ಪ್ರಯಾಣಿಸುವಾಗ ಸಂಕಷ್ಟದಲ್ಲಿರುವವರಿಗೆ ಹಾಗೂ ಶ್ರಮಜೀವಿಗಳಿಗೆ ನೆರವಾಗುವ ವೀಡಿಯೋಗಳನ್ನು ಹಂಚಿಕೊಳ್ಳುವ ಸಮೀರ್, ಇತ್ತೀಚೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಸ್ತೆಬದಿಯಲ್ಲಿ ಕರ್ತವ್ಯದಲ್ಲಿದ್ದ ಬಿಹಾರ ಪೊಲೀಸರನ್ನು ಕಂಡಿದ್ದಾರೆ. ತಕ್ಷಣವೇ ಬೈಕ್​ ನಿಲ್ಲಿಸಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. 
ಈ ವೇಳೆ ಪೊಲೀಸರು ನಗುಮುಖದಿಂದಲೇ "ವೀಡಿಯೋ ರೆಕಾರ್ಡ್ ಮಾಡುತ್ತಿದ್ದೀರಾ?" ಎಂದು ಕುತೂಹಲದಿಂದ ಕೇಳಿದ್ದು, ಆತನ ಬೈಕ್‌ನಲ್ಲಿದ್ದ ಕ್ಯಾಮೆರಾ ಸೆಟಪ್ ಅನ್ನು ಹತ್ತಿರ ಬಂದು ವೀಕ್ಷಿಸಿದ್ದಾರೆ.

ಬ್ಯಾಗ್‌ನಿಂದ ಹೊರಬಂತು ತಂಪಾದ ಲಸ್ಸಿ ಮತ್ತು ನೀರಿನ ಬಾಟಲ್!

ಪೊಲೀಸರ ಬಳಿ ಕ್ಷೇಮ ವಿಚಾರಿಸಿದ ಸಮೀರ್, ಇಂದು ವಾತಾವರಣ ತುಂಬಾ ಬಿಸಿಯಾಗಿದೆ ಎಂದು ಪೊಲೀಸರ ಬಳಿ ಮಾತನಾಡುತ್ತಾ, ತಮ್ಮ ಬ್ಯಾಗ್​ನಲ್ಲಿದ್ದ ನೀರು ಮತ್ತು ಲಸ್ಸಿ ಬಾಟಲಿಗಳನ್ನು ಹೊರತೆಗೆದಿದ್ದಾರೆ. ಸುಡುವ ಬಿಸಿಲಿನಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಇದನ್ನು ನೀಡಿದ್ದಾರೆ. ಆದಾಗ್ಯೂ, ಯುವಕನ ಈ ಅನಿರೀಕ್ಷಿತ ಪ್ರೀತಿ ಮತ್ತು ಗೌರವದ ನಡವಳಿಕೆಯನ್ನು ಕಂಡು ಪೊಲೀಸರು ಮುಗುಳ್ನಗುತ್ತಲೇ ತಂಪು ಪಾನೀಯಗಳನ್ನು ಸ್ವೀಕರಿಸಿದರು. 

ರಸ್ತೆಬದಿಯ ಇತರರಿಗೂ ನೆರವಾದ ಯುವಕ

ಮಾತುಕತೆಯ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಬಿಸಿಲಿನಲ್ಲಿ ನಿಂತಿದ್ದ ಇತರ ಸಾರ್ವಜನಿಕರನ್ನು ತೋರಿಸಿ ಅವರಿಗೆ ತಂಪು ಪಾನೀಯ ನೀಡುವಂತೆ ಕೇಳಿಕೊಂಡರು. ಅದರಂತೆಯೇ ಸಮೀರ್​ ಇತರರಿಗೂ ತಂಪು ಪಾನೀಯ ವಿತರಿಸಿ, ಕರ್ತವ್ಯದಲ್ಲಿದ್ದ ಪೊಲೀಸರಿಗೆ ಧನ್ಯವಾದ ಹೇಳುತ್ತಾ ತಮ್ಮ ಪ್ರಯಾಣವನ್ನು ಮುಂದುವರೆಸಿದರು. 

ನೆಟ್ಟಿಗರ ಪ್ರತಿಕ್ರಿಯೆ

ಪ್ರತಿದಿನ ಸಾರ್ವಜನಿಕರ ಸುರಕ್ಷತೆಗಾಗಿ ಶ್ರಮಿಸುವ ಪೊಲೀಸ್ ಸಿಬ್ಬಂದಿಗೆ ಈ ವೀಡಿಯೋವನ್ನು ಸಮರ್ಪಿಸುವುದಾಗಿ ಸಮೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಇದೇ ನಿಜವಾದ ಮಾನವೀಯತೆ, ನಿಮ್ಮ ಈ ರೀತಿಯ ಒಳ್ಳೆಯ ಕೆಲಸಗಳು ಹೀಗೆಯೇ ಮುಂದುವರಿಯಲಿ ಎಂದು  ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).