ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಡಿಯು ನಾಯಕ ನಿತೀಶ್​ ಕುಮಾರ್​ 
ದೇಶ

ಸ್ಪಷ್ಟ ಬಹುಮತದತ್ತ NDA ದಾಪುಗಾಲು: ಆರಂಭದಲ್ಲಿ ಪೈಪೋಟಿ ನೀಡಿದ್ದ ಮಹಾಘಟ್​ಬಂಧನ್​ ಭಾರಿ ಕುಸಿತ! Bihar Assembly Election 2025

ಪ್ರಮುಖ ಮುಖ್ಯಾಂಶಗಳು

  • ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ
  • ಪ್ರಸ್ತುತ ಭಾರಿ ಮುನ್ನಡೆಯಲ್ಲಿದೆ ಎನ್​ಡಿಎ
  • ಮ್ಯಾಜಿಕ್​ ನಂಬರ್​ ದಾಟಿ ಸ್ಪಷ್ಟ ಬಹುಮತದತ್ತ ದಾಪುಗಾಲು
  • ಮತಗಳಿಕೆಯಲ್ಲಿ ಹಿಂದಿ ಬಿದ್ದ ಮಹಾಘಟಬಂಧನ್
ಪಟನಾ: ಬಿಹಾರ ವಿಧಾನಸಭಾ ಚುನಾವಣೆಯ ( Bihar Assembly Election 2025 ) ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ನಡೆಯುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (ಎನ್​ಡಿಎ ) ಪ್ರಸ್ತುತ ಭಾರಿ ಮುನ್ನಡೆಯಲ್ಲಿದೆ. ಮ್ಯಾಜಿಕ್​ ನಂಬರ್​ ದಾಟಿದ್ದು, ಸ್ಪಷ್ಟ ಬಹುಮತದತ್ತ ದಾಪುಗಾಲು ಇಡುತ್ತಿದೆ. ಇನ್ನೊಂದೆಡೆ ರಾಷ್ಟ್ರೀಯ ಜನತಾ ದಳ ಹಾಗೂ ಕಾಂಗ್ರೆಸ್​ ನೇತೃತ್ವದ ಮಹಾಘಟಬಂಧನ್ ಮತಗಳಿಕೆಯಲ್ಲಿ ಹಿಂದಿ ಬಿದ್ದಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್​ಡಿಎ 122 ಸ್ಥಾನಗಳ ಬಹುಮತದ ಗಡಿಯನ್ನು ದಾಟಿದೆ ಮತ್ತು ಪ್ರಸ್ತುತ 160 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ತೇಜಸ್ವಿ ಯಾದವ್ ಅವರ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ 79 ಸ್ಥಾನಗಳಲ್ಲಿ ಮುಂದಿದೆ. ಚುನಾವಣಾ ಚಾಣಕ್ಯ ಎಂದೇ ಖ್ಯಾತರಾದ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಕೇವಲ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಆರಂಭದಲ್ಲಿ 100 ಕ್ಷೇತ್ರಗಳಲ್ಲಿ ಮುನ್ನಡೆಯೊಂದಿಗೆ ಪ್ರಬಲ ಪೈಪೋಟಿ ನೀಡಿದ ಮಹಾಘಟ್​ಬಂಧನ್​ ಇದೀಗ ಅನೇಕ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದು 100 ರಿಂದ 74ಕ್ಕೆ ಕುಸಿದಿದೆ.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾವನ್ನು ಒಳಗೊಂಡಿರುವ ಎನ್‌ಡಿಎ 243 ಸ್ಥಾನಗಳಲ್ಲಿ 146 ಸ್ಥಾನಗಳನ್ನು ಪಡೆಯಲಿದೆ ಎಂದು ಅನೇಕ ಎಕ್ಸಿಟ್​ ಪೋಲ್​ಗಳು ಭವಿಷ್ಯ ನುಡಿದಿದ್ದವು. ಅದರಂತೆ ಎನ್​ಡಿಎ ಗೆಲುವಿನತ್ತ ಮುನ್ನುಗ್ಗುತ್ತಿದೆ.
ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಪ್ರಮುಖ ಘಟಕಗಳನ್ನಾಗಿ ಹೊಂದಿರುವ ಮಹಾಘಟಬಂಧನ್ ಕೇವಲ 92 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಕಳೆದ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗಳಿಸಿತ್ತು. ಆದರೆ, ಈ ಬಾರಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಜನ್ ಸುರಾಜ್ ತನ್ನ ಚೊಚ್ಚಲ ಚುನಾವಣೆಯಲ್ಲೇ ಕೇವಲ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಹೀನಾಯ ಸೋಲು ಅನುಭವಿಸುವ ಸಾಧ್ಯತೆ ಇದೆ.
243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ನವೆಂಬರ್ 6ರಂದು ಮೊದಲ ಹಂತದಲ್ಲಿ 121 ಮತ್ತು ನವೆಂಬರ್ 11ರಂದು ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡೂ ಹಂತಗಳೂ ಸೇರಿ ದಾಖಲೆಯ 67.13 ರಷ್ಟು ಮತದಾನ ನಡೆದಿದೆ. 2,616 ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರದಲ್ಲಿ ದಾಖಲಾಗಿದ್ದು, ಇಂದು ಭವಿಷ್ಯ ನಿರ್ಧಾರವಾಗಲಿದೆ.
39 ಜಿಲ್ಲೆಗಳಲ್ಲಿ 42 ಮತ ಎಣಿಕೆ ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆಗಳನ್ನು ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ, (ಏಜೆನ್ಸೀಸ್​).