IPL ಇತಿಹಾಸದ ಬಿಗ್ ಟ್ರೇಡಿಂಗ್: 12 ಕೋಟಿ ರೂಪಾಯಿ ವೇತನ ಕಡಿತಕ್ಕೆ ಒಪ್ಪಿ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ ಪಂತ್!
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2027 ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಸ್ಫೋಟಕ ಹಾಗೂ ಅತಿ ದೊಡ್ಡ ಆಟಗಾರರ ಅದಲು-ಬದಲು ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್(Rishabh Pant) ಮತ್ತೆ ತಮ್ಮ ಹಳೆಯ ತವರು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಮರಳುತ್ತಿರುವುದು ಈಗ ಬಹುತೇಕ ಖಚಿತವಾಗಿದೆ. ಆದರೆ, ಈ ‘ಹೋಮ್ ಕಮಿಂಗ್ಗಾಗಿ ಪಂತ್ ಬರೋಬ್ಬರಿ 12 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟ ಹಾಗೂ ವೇತನ ಕಡಿತಕ್ಕೆ ಒಪ್ಪಿಕೊಂಡಿರುವುದು ಇಡೀ ಕ್ರಿಕೆಟ್ ವಲಯವನ್ನು ಆಶ್ಚರ್ಯಚಕಿತಗೊಳಿಸಿದೆ.
‘ಕ್ರಿಕ್‌ಬಜ್’ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಕುಲದೀಪ್ ಯಾದವ್ ಮತ್ತು ರಿಷಭ್ ಪಂತ್ ಅವರ ಅದಲು-ಬದಲಿನ ಈ ಐತಿಹಾಸಿಕ ಒಪ್ಪಂದದ ಫೈಲ್ ಸದ್ಯ ಬಿಸಿಸಿಐ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.
27 ಕೋಟಿಯಿಂದ 15 ಕೋಟಿಗೆ!; ಪಂತ್ ಬಿಗ್ ಸ್ಯಾಕ್ರಿಫೈಸ್
2025ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಿಷಭ್ ಪಂತ್ ಅವರನ್ನು ಐಪಿಎಲ್ ಇತಿಹಾಸದಲ್ಲೇ ದಾಖಲೆಯ 27 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆದರೆ, ಲಕ್ನೋ ಪರ ಕಳೆದ ಎರಡು ಸೀಸನ್‌ಗಳಲ್ಲಿ ಪಂತ್ ಫಾರ್ಮ್ ಅಷ್ಟೇನೂ ಉತ್ತಮವಾಗಿರಲಿಲ್ಲ. ಈಗ ಮತ್ತೆ ಡೆಲ್ಲಿಗೆ ಮರಳಲು ಉತ್ಸುಕರಾಗಿರುವ ಪಂತ್, ತಮ್ಮ ಹಳೆಯ ಒಪ್ಪಂದದ ಶೇ. 44.44 ರಷ್ಟು ದೊಡ್ಡ ಮೊತ್ತವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದಾರೆ.
ಹೊಸ ಒಪ್ಪಂದದ ಪ್ರಕಾರ, ಪಂತ್ ಅವರ ಐಪಿಎಲ್ ಸರಣಿ ವೇತನ 27 ಕೋಟಿಯಿಂದ ನೇರವಾಗಿ 15 ಕೋಟಿ ರೂಪಾಯಿಗೆ ಇಳಿಕೆಯಾಗಲಿದೆ. ಈ 12 ಕೋಟಿಯ ವೇತನ ಕಡಿತವೇ ಈ ಬೃಹತ್ ಟ್ರೇಡಿಂಗ್‌ಗೆ ಅತಿ ದೊಡ್ಡ ದಾರಿಯಾಗಿದೆ. ಏಕೆಂದರೆ, ಯಾವುದೇ ಫ್ರಾಂಚೈಸಿಗೆ ಒಬ್ಬ ಆಟಗಾರನಿಗೆ 27 ಕೋಟಿ ರೂಪಾಯಿ ನೀಡುವುದು ಹಾಗೂ ಹರಾಜಿನ ಪರ್ಸ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಷ್ಟದ ಮಾತಾಗಿತ್ತು. ಪಂತ್ ತಮ್ಮ ಹಠ ಬಿಟ್ಟು ಹಣಕಾಸಿನ ವಿಷಯದಲ್ಲಿ ಮೃದು ಧೋರಣೆ ತಳೆದಿದ್ದರಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ಈ ವ್ಯವಹಾರವನ್ನು ಯಶಸ್ವಿಯಾಗಿ ಮುಗಿಸಲು ಸಾಧ್ಯವಾಗಿದೆ.
ಲಕ್ನೋ ಪಾಲಾಗಲಿದ್ದಾರೆ ಉತ್ತರ ಪ್ರದೇಶದ ಹುಡುಗ ಕುಲದೀಪ್ ಯಾದವ್
ಈ ಮಹತ್ವದ ಒಪ್ಪಂದದ ಭಾಗವಾಗಿ, ಭಾರತದ ಸ್ಟಾರ್ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಡೆಲ್ಲಿ ತಂಡವನ್ನು ತೊರೆದು ಲಕ್ನೋ ಸೂಪರ್ ಜೈಂಟ್ಸ್ ಸೇರಲಿದ್ದಾರೆ. ಕುಲದೀಪ್ ಸದ್ಯ ತಾವಿರುವ 13.25 ಕೋಟಿ ರೂಪಾಯಿಗಳ ಹಳೆಯ ಒಪ್ಪಂದದ ಬೆಲೆಗೇ ಲಕ್ನೋ ತಂಡದ ಪಾಲಾಗಲಿದ್ದಾರೆ.
ವಿಶೇಷವೆಂದರೆ, ಈ ಅದಲು-ಬದಲು ಇಬ್ಬರೂ ಆಟಗಾರರಿಗೆ ತಮ್ಮ ಸ್ವಂತ ತವರಿನ ಭಾವನಾತ್ಮಕ ಮರುಸೇರ್ಪಡೆಯಾಗಿದೆ. ರಿಷಭ್ ಪಂತ್ ತಮ್ಮ ದೇಶಿ ಕ್ರಿಕೆಟ್ ಅನ್ನು ಡೆಲ್ಲಿ ಪರವಾಗಿಯೇ ಆಡಿದ್ದು, 2016 ರಿಂದ 2024 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಆಟಗಾರನಾಗಿದ್ದರು. ಇನ್ನೊಂದೆಡೆ, ಕುಲದೀಪ್ ಯಾದವ್ ಮೂಲತಃ ಉತ್ತರ ಪ್ರದೇಶದವರಾಗಿದ್ದು, ತಮ್ಮ ರಾಜ್ಯದ ಫ್ರಾಂಚೈಸಿಯಾದ ಲಕ್ನೋ ತಂಡವನ್ನು ಪ್ರತಿನಿಧಿಸಲು ಅವರು ಉತ್ಸುಕರಾಗಿದ್ದಾರೆ.
JSW ಕೈಗೆ ಡೆಲ್ಲಿ ಸೂತ್ರ; ಆದರೆ ಪಂತ್‌ಗೆ ಸದ್ಯಕ್ಕಿಲ್ಲ ನಾಯಕತ್ವ
2024ರ ಸೀಸನ್ ಮುಕ್ತಾಯದ ಬಳಿಕ ಮ್ಯಾನೇಜ್‌ಮೆಂಟ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಪಂತ್ ಡೆಲ್ಲಿ ತೊರೆದಿದ್ದರು. ಆದರೆ, ಮುಂಬರುವ ಎರಡು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ಆಡಳಿತಾತ್ಮಕ ನಿಯಂತ್ರಣವು JSW ಮತ್ತು ಪಾರ್ಥ್ ಜಿಂದಾಲ್ ಅವರ ಕೈಗೆ ಬರಲಿರುವುದರಿಂದ, ಪಂತ್ ವಾಪಸಾತಿ ಸುಲಭವಾಗಿದೆ. ಪಾರ್ಥ್ ಜಿಂದಾಲ್ ಅವರಿಗೆ ಪಂತ್ ಆಟದ ಬಗ್ಗೆ ಮೊದಲಿನಿಂದಲೂ ಅಪಾರ ಒಲವಿತ್ತು.
ಆದಾಗ್ಯೂ, ಡೆಲ್ಲಿ ತಂಡಕ್ಕೆ ಮರಳಿದ ತಕ್ಷಣವೇ ಪಂತ್ ಅವರಿಗೆ ನಾಯಕತ್ವದ ಪಟ್ಟ ಸಿಗುವುದು ಅನುಮಾನ ಎನ್ನಲಾಗಿದೆ. ಸದ್ಯಕ್ಕೆ ಅವರನ್ನು ಕೇವಲ ಒಬ್ಬ ಪರಿಣಿತ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮಾತ್ರ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತಿದ್ದು, ನಾಯಕತ್ವದ ಜವಾಬ್ದಾರಿಯನ್ನು ಬೇರೆ ಆಟಗಾರನಿಗೆ ನೀಡುವ ಆಲೋಚನೆಯಲ್ಲಿ ಡೆಲ್ಲಿ ಮ್ಯಾನೇಜ್‌ಮೆಂಟ್ ಇದೆ. ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂತ್ ಅವರ ನಿರ್ಗಮನದೊಂದಿಗೆ ಹೊಸ ನಾಯಕ ಹಾಗೂ ಹೊಸ ತಂತ್ರದೊಂದಿಗೆ ಕಣಕ್ಕಿಳಿಯಲು ಸಂಪೂರ್ಣವಾಗಿ ಸಜ್ಜಾಗಿದೆ,(ಏಜೆನ್ಸೀಸ್).