Devendra-Uddhav 
ದೇಶ

ಇವತ್ತಿನ ಬಿಗ್ಗೆಸ್ಟ್ ನ್ಯೂಸ್ ಇದೇ!...ಒಂದೇ ವಿಮಾನದಲ್ಲಿ ಮುಖಾಮುಖಿಯಾದ ಫಡ್ನವಿಸ್-ಉದ್ಧವ್ | Devendra-Uddhav

Devendra-Uddhav: ಮಹಾರಾಷ್ಟ್ರ ರಾಜಕಾರಣದ ತೀವ್ರ ಜಿದ್ದಾಜಿದ್ದಿನ ನಡುವೆಯೇ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶುಕ್ರವಾರ ಮುಂಬೈನಿಂದ ನಾಗ್ಪುರಕ್ಕೆ ಒಂದೇ ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು ತೀವ್ರ ಕುತೂಹಲ ಮೂಡಿಸಿದೆ. ಉದ್ಧವ್ ಠಾಕ್ರೆ ಅವರೊಂದಿಗೆ ಅವರ ಪುತ್ರ ಆದಿತ್ಯ ಠಾಕ್ರೆ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಮತ್ತು ಶಿವಸೇನಾ (ಯುಬಿಟಿ) ಪಕ್ಷದ ಇತರ ಹಿರಿಯ ನಾಯಕರಿದ್ದರು.
ಉದ್ಧವ್ ನೇತೃತ್ವದ ಶಿವಸೇನೆಯಿಂದ ಆರು ಲೋಕಸಭಾ ಸಂಸದರು ಇತ್ತೀಚೆಗಷ್ಟೇ ಪಕ್ಷಾಂತರ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಯಾಣ ಮಹತ್ವ ಪಡೆದುಕೊಂಡಿದೆ. ವಿಮಾನದಲ್ಲಿ ಮುಖಾಮುಖಿಯಾದ ಉಭಯ ನಾಯಕರು ಪರಸ್ಪರ ಹಸ್ತಲಾಘವ ಮಾಡಿ, ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ನಾವಿಬ್ಬರೂ ಹೀಗೆ ಒಟ್ಟಿಗೆ ಭೇಟಿಯಾಗಿರುವುದು ಇವತ್ತಿನ ಅತ್ಯಂತ ದೊಡ್ಡ ಸುದ್ದಿ ಎಂದು ಚಟಾಕಿ ಹಾರಿಸಿದ್ದಾರೆ.

ರಾಜಕೀಯ ಬಣ್ಣ ಬಳಿಯಬೇಡಿ ಎಂದ ಬಿಜೆಪಿ

ಇತ್ತೀಚೆಗೆ ಬಂಡಾಯವೆದ್ದು ಪಕ್ಷ ತೊರೆದ ಸಂಸದರ ಕ್ಷೇತ್ರಗಳನ್ನು ಒಳಗೊಂಡಂತೆ ವಿದರ್ಭ ಪ್ರದೇಶದ ಪ್ರವಾಸಕ್ಕಾಗಿ ಉದ್ಧವ್ ಠಾಕ್ರೆ ನಾಗ್ಪುರಕ್ಕೆ ತೆರಳುತ್ತಿದ್ದರು. ಪಕ್ಷಾಂತರದ ನಂತರ ಉದ್ಧವ್ ಅವರ ಮೊದಲ ವಿದರ್ಭ ಪ್ರವಾಸ ಇದಾಗಿದ್ದು, ನಾಗ್ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಅದೇ ಸಮಯದಲ್ಲಿ ದೇವೇಂದ್ರ ಫಡ್ನವಿಸ್ ಅವರು ತಮ್ಮ ತವರೂರಾದ ನಾಗ್ಪುರಕ್ಕೆ ನಿಯಮಿತ ಪ್ರವಾಸದ ಭಾಗವಾಗಿ ಪ್ರಯಾಣಿಸುತ್ತಿದ್ದರು.
ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿ, ಈ ಭೇಟಿಗೆ ಯಾವುದೇ ರಾಜಕೀಯ ಬಣ್ಣ ಬಳಿಯದಂತೆ ತಕ್ಷಣವೇ ಸ್ಪಷ್ಟನೆ ನೀಡಿದೆ. ಬಿಜೆಪಿ ಎಂಎಲ್‌ಸಿ ಪ್ರಸಾದ್ ಲಾಡ್ ಮಾತನಾಡಿ, ಫಡ್ನವಿಸ್ ಅವರು ಮುಂಬೈ ಮತ್ತು ನಾಗ್ಪುರ ನಡುವೆ ನಿಯಮಿತವಾಗಿ ವಿಮಾನದಲ್ಲಿ ಸಂಚರಿಸುತ್ತಾರೆ, ಆದರೆ ಉದ್ಧವ್ ಠಾಕ್ರೆ ಅವರು ಖಾಸಗಿ ಜೆಟ್ ಬಿಟ್ಟು ಸಾಮಾನ್ಯ ಕಮರ್ಷಿಯಲ್ ವಿಮಾನದಲ್ಲಿ ಪ್ರಯಾಣಿಸಿದ್ದೇ ತಮಗೆ ಹೆಚ್ಚು ಆಶ್ಚರ್ಯ ತಂದಿದೆ ಎಂದಿದ್ದಾರೆ. ತಾವು ರಾಜಕೀಯ ವಿರೋಧಿಗಳೇ ಹೊರತು ವೈರಿಗಳಲ್ಲ ಎಂದ ಅವರು, ಹಿಂದೆ ಉಭಯ ಪಕ್ಷಗಳ ನಡುವೆ ತೀವ್ರ ಉದ್ವಿಗ್ನತೆ ಇದ್ದಾಗಲೂ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬದವರು ತಮ್ಮ ಮಗಳ ಮದುವೆಗೆ ಆಗಮಿಸಿದ್ದನ್ನು ನೆನಪಿಸಿಕೊಂಡರು.
ಫಡ್ನವಿಸ್ ಅವರು ಎಲ್ಲಾ ಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ವ್ಯಕ್ತಿ ಎಂದು ಲಾಡ್ ಬಣ್ಣಿಸಿದ್ದು, ಆರು ಲೋಕಸಭಾ ಸಂಸದರ ಪಕ್ಷಾಂತರದ ಕುರಿತು ಮಾತನಾಡಿದ ಲಾಡ್, ಈ ಪ್ರಕ್ರಿಯೆ ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿತ್ತು ಮತ್ತು ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಉದ್ಧವ್ ಅವರಿಗೆ ಇದರಿಂದ ನಿರಾಶೆಯಾಗಿರಬಹುದು, ಆದರೆ ಅವರ ಮುಖದಲ್ಲಿ ಇನ್ನೂ ನಗು ಇರುವುದನ್ನು ತಾವು ಕಂಡಿರುವುದಾಗಿ ತಿಳಿಸಿದ್ದಾರೆ.

ಇದು ಕಾಕತಾಳೀಯವೆಂದ ಉದ್ಧವ್​ ಬಣ

ಇತ್ತ ಶಿವಸೇನಾ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆ ಕೂಡ ಈ ಭೇಟಿಯ ಕುರಿತು ಮಾತನಾಡಿದ್ದು, ಇದು ಕಾಕತಾಳೀಯವಾಗಿದ್ದು, ಇದರಲ್ಲಿ ಯಾವುದೇ ವಿಶೇಷ ರಾಜಕೀಯ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ. ಇಂಧನ ಉಳಿತಾಯ ಮತ್ತು ವಿಐಪಿಗಳು ಖಾಸಗಿ ಜೆಟ್‌ಗಳ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿರುವಾಗ, ಸಾಮಾನ್ಯ ವಿಮಾನದ ಬಳಕೆಯನ್ನು ಅದೇ ನಿಟ್ಟಿನಲ್ಲಿ ನೋಡಬೇಕೇ ಹೊರತು ರಾಜಕೀಯ ಸಂಕೇತವಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾಗ್ಪುರ ಮುಖ್ಯಮಂತ್ರಿಯವರ ತವರೂರಾಗಿದ್ದು, ಉದ್ಧವ್ ಅವರ ಪ್ರವಾಸ ಮುಂಚಿತವಾಗಿಯೇ ನಿಗದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಮಹಾರಾಷ್ಟ್ರ ರಾಜಕೀಯದಲ್ಲಿ ಪಕ್ಷಾಂತರದ ಬಿಸಿ ಇರುವಾಗಲೇ ಕಡು ರಾಜಕೀಯ ವೈರಿಗಳು ಒಂದೇ ವಿಮಾನದಲ್ಲಿ ಮುಖಾಮುಖಿಯಾಗಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ(ಏಜೆನ್ಸೀಸ್​).