ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
- ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
- ಕೊಚ್ಚಿಯಲ್ಲಿ ಎನ್‌ಐಎ ಕಾರ್ಯಾಚರಣೆ
- ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮರ್ ಫಾರೂಕ್ ಬಂಧನ
ಬೆಂಗಳೂರು: ಸುಳ್ಯದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ
(Praveen Nettaru case) ಕ್ಕೆ ಮತ್ತೊಂದು ಬ್ರೇಕ್ ಸಿಕ್ಕಿದ್ದು, ನಾಲ್ಕು ವರ್ಷದಿಂದ ತಲೆ ಮರೆಸಿಕೊಂಡಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಉಮರ್ ಫಾರೂಕ್ ಕೊಚ್ಚಿಯಲ್ಲಿ ಸಿಕ್ಕಿಬಿದ್ದಿದ್ದಾನೆಂದು ವರದಿಯಾಗಿದೆ.
ಖಚಿತ ಗುಪ್ತಚರ ಮಾಹಿತಿ ಆಧರಿಸಿ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈ ಉಮರ್ ಫಾರೂಕ್ನನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದು, ಈ ಪ್ರಕರಣದ ಒಟ್ಟು ಬಂಧಿತರ ಸಂಖ್ಯೆ 25 ಕ್ಕೇರಿದೆ.
2 ಲಕ್ಷ ಬಹುಮಾನ ಘೋಷಿಸಿದ್ದ ಎನ್‌ಐಎ!
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದ ಈ ಉಮರ್ ಫಾರೂಕ್, ಇಂದು ಕೇರಳದ ಕೊಚ್ಚಿಯಲ್ಲಿ ಬಂಧನಾಗಿದ್ದಾನೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳ (NIA) ದ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಿಂದ ಇತನ ಹುಡುಕಾಟ ನಡೆಸುತ್ತಿದ್ದು, ಇಂಟರ್ಪೋಲ್ನಿಂದ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ವಾರೆಂಟ್ಅನ್ನು ಜಾರಿಗೊಳಿಸಿದ್ದರು. ಹಾಗೆಯೇ ಇವನನ್ನು ಹುಡುಕಿಕೊಟ್ಟ, ಅಥವಾ ಇವನ ಬಗ್ಗೆ ಮಾಹಿತಿ ನೀಡಿದವರಿಗೆ 2 ಲಕ್ಷ ಬಹುಮಾನ ನೀಡುವುದಾಗಿ ಹೇಳಲಾಗಿತ್ತು.
2022 ಜುಲೈ 26 ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಎಂಬಾತನನ್ನು ಕೊಲೆ ಮಾಡಲಾಗಿತ್ತು. ಈ ಕೊಲೆಯನ್ನು ನಿಷೇಧಿತ ಪಿಎಫ್ಐ ಸಂಘಟನೆ ಮಾಡಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ಎನ್ಐಎಗೆ ವಹಿಸಲಾಗಿತ್ತು,(ಏಜನ್ಸೀಸ್).