ಸೆಪ್ಟೆಂಬರ್ 9-10ಕ್ಕೆ UGC NET ಅಭ್ಯರ್ಥಿಗಳಿಗೆ 3 ವಿಷಯಗಳ ಮರು ಪರೀಕ್ಷೆ
- ಸೆಪ್ಟೆಂಬರ್ 9-10ಕ್ಕೆ UGC NET ಅಭ್ಯರ್ಥಿಗಳಿಗೆ ಮರು ಪರೀಕ್ಷೆ
- ಮರು ಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ
- ಮೂರು ವಿಷಯಗಳ ಮರು ಪರೀಕ್ಷೆಯ ಫಲಿತಾಂಶ ಬಳಿಕ ಪ್ರಕಟ
UGC NET 2026 latest update: ಯುಜಿಸಿ ನೆಟ್ ಜೂನ್ 2026ರ ಪರೀಕ್ಷೆಗೆ ಸಂಬಂಧಿಸಿದಂತೆ ಇಂಗ್ಲಿಷ್, ಕಾಮರ್ಸ್ ಮತ್ತು ಸೋಶಿಯಾಲಜಿ ಅಭ್ಯರ್ಥಿಗಳಿಗೆ ಮಹತ್ವದ ಅಪ್‌ಡೇಟ್ ಸಿಕ್ಕಿದೆ. ಈ ಮೂರು ವಿಷಯಗಳ ಮರುಪರೀಕ್ಷೆಯನ್ನು ನಡೆಸಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಿರ್ಧರಿಸಿದೆ. ಅಧಿಕೃತ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 9 ಮತ್ತು 10ರಂದು ಮರು ಪರೀಕ್ಷೆ ನಡೆಯುತ್ತದೆ.
ಯಾವ ವಿಷಯ ಯಾವಾಗ?
ಇಂಗ್ಲಿಷ್ ಪರೀಕ್ಷೆ ಸೆಪ್ಟೆಂಬರ್ 9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಕಾಮರ್ಸ್ ಪರೀಕ್ಷೆ ಅದೇ ದಿನ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಹಾಗೂ ಸೋಶಿಯಾಲಜಿ ಮರು ಪರೀಕ್ಷೆ ಸೆಪ್ಟೆಂಬರ್ 10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ.
ಮರು ಪರೀಕ್ಷೆ ಯಾಕೆ?
ಇಂಗ್ಲಿಷ್, ಕಾಮರ್ಸ್ ಮತ್ತು ಸೋಶಿಯಾಲಜಿ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದಂತೆ ಎನ್‌ಟಿಎಗೆ ಹಲವು ದೂರುಗಳು ಬಂದಿದ್ದವು. ಈ ದೂರುಗಳ ಬಗ್ಗೆ ಪರಿಶೀಲನೆ ನಡೆಸಲು ಎನ್‌ಟಿಎ ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಪರಿಶೀಲನೆ ವೇಳೆ ಪ್ರಶ್ನೆಪತ್ರಿಕೆಗಳಲ್ಲಿ ಕೆಲವೊಂದು ದೋಷಗಳು ಕಂಡುಬಂದಿವೆ. ಈ ಪ್ರಶ್ನೆಗಳನ್ನು ಕೈಬಿಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಸಮಿತಿ ಹೇಳಿದೆ. ಹೀಗಾಗಿ ಈ ಮೂರು ವಿಷಯಗಳ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲು ಎನ್‌ಟಿಎ ನಿರ್ಧಾರಿಸಿದೆ.
ಮರು ಪರೀಕ್ಷೆಗೆ ಫೀಸ್ ಕಟ್ಟಬೇಕಾ?
ಇಲ್ಲ. ಇಂಗ್ಲಿಷ್, ಕಾಮರ್ಸ್ ಮತ್ತು ಸೋಶಿಯಾಲಜಿ ಮರು ಪರೀಕ್ಷೆಗೆ ಅಭ್ಯರ್ಥಿಗಳು ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕ ಪಾವತಿಸಬೇಕಾಗಿಲ್ಲ. ಪರೀಕ್ಷಾ ಕೇಂದ್ರ, ಪರೀಕ್ಷಾ ನಗರ ಮತ್ತು ಅಡ್ಮಿಟ್ ಕಾರ್ಡ್‌ಗೆ ಕುರಿತ ಮಾಹಿತಿಯನ್ನು ಎನ್‌ಟಿಎ ಪ್ರತ್ಯೇಕವಾಗಿ ಪ್ರಕಟಿಸಲಿದೆ.
84 ವಿಷಯಗಳ ಫಲಿತಾಂಶ ಪ್ರಕಟ
ಇದೇ ವೇಳೆ ಎನ್‌ಟಿಎ ಈಗಾಗಲೇ 84 ವಿಷಯಗಳ ಯುಜಿಸಿ ನೆಟ್ ಜೂನ್ 2026 ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ ಇಂಗ್ಲಿಷ್, ಕಾಮರ್ಸ್ ಮತ್ತು ಸೋಶಿಯಾಲಜಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ತಮ್ಮ ರಿಸಲ್ಟ್ಗಾಗಿ ಇನ್ನಷ್ಟು ಕಾಯಬೇಕಿದೆ. ಮರು ಪರೀಕ್ಷೆ ಬಳಿಕವೇ ಫಲಿತಾಂಶ ಪ್ರಕಟಿಸಲಾಗುತ್ತದೆ.
ಯುಜಿಸಿ ನೆಟ್ ಜೂನ್ 2026 ಪರೀಕ್ಷೆಯನ್ನು ಎನ್‌ಟಿಎ ಜೂನ್ 22ರಿಂದ 30ರವರೆಗೆ ಒಟ್ಟು 87 ವಿಷಯಗಳಲ್ಲಿ ನಡೆಸಿತ್ತು. ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಹಾಗೂ PhD ಪ್ರವೇಶಕ್ಕೆ ಅರ್ಹತೆ ಪಡೆಯಲು ಈ ಪರೀಕ್ಷೆ ಪ್ರಮುಖವಾಗಿದೆ,(ಏಜೆನ್ಸೀಸ್).