Lalit Hotel 
ದೇಶ

‘ದಿ ಲಲಿತ್’ ಹೋಟೆಲ್‌ಗೆ ಬಿಗ್ ಶಾಕ್: 1 ಸಾವಿರ ಕೋಟಿ ರೂ. ಬಾಕಿ ಪಾವತಿಗೆ ಹೈಕೋರ್ಟ್ ಹಸಿರು ನಿಶಾನೆ | Lalit Hotel

ನವದೆಹಲಿ: ಪ್ರತಿಷ್ಠಿತ ‘ದಿ ಲಲಿತ್’ ಹೋಟೆಲ್(Lalit Hotel) ಸಮೂಹದ ಒಡೆತನ ಹೊಂದಿರುವ ಭಾರತ್ ಹೋಟೆಲ್ಸ್ ಸಂಸ್ಥೆಗೆ ದೆಹಲಿ ಹೈಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ಬಾರಾಖಂಬಾ ರಸ್ತೆಯಲ್ಲಿರುವ ಹೋಟೆಲ್‌ನ ಪರವಾನಗಿ ಶುಲ್ಕದ ಬಾಕಿ ರೂಪದಲ್ಲಿ ಸುಮಾರು 1,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಸೂಲಿ ಮಾಡಲು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಗೆ ನ್ಯಾಯಾಲಯವು ಹಸಿರು ನಿಶಾನೆ ತೋರಿದೆ.

ಏನಿದು ಪ್ರಕರಣ?

ದಶಕಗಳ ಹಿಂದಿನ ಈ ವಿವಾದವು ದೆಹಲಿಯ ಅತ್ಯಂತ ದುಬಾರಿ ಭೂಮಿಯ ಬಳಕೆಗೆ ಸಂಬಂಧಿಸಿದ್ದಾಗಿದೆ. 1982ರ ಏಪ್ರಿಲ್ 22 ರಂದು ಏಷ್ಯನ್ ಗೇಮ್ಸ್ ಸಿದ್ಧತೆಗಾಗಿ ಬಾರಾಖಂಬಾ ರಸ್ತೆಯಲ್ಲಿರುವ ಸುಮಾರು 6 ಎಕರೆ ಜಮೀನನ್ನು ಪಂಚತಾರಾ ಹೋಟೆಲ್ ನಿರ್ಮಿಸಲು ಭಾರತ್ ಹೋಟೆಲ್ಸ್‌ಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಅಂದು ನಿಗದಿಪಡಿಸಲಾದ ವಾರ್ಷಿಕ ಪರವಾನಗಿ ಶುಲ್ಕ ಕೇವಲ 1.45 ಕೋಟಿ ರೂಪಾಯಿಗಳಾಗಿತ್ತು.
ಗುತ್ತಿಗೆಯ ನಿಯಮಗಳ ಪ್ರಕಾರ, ಪ್ರತಿ 33 ವರ್ಷಗಳಿಗೊಮ್ಮೆ ಈ ಶುಲ್ಕವನ್ನು ಪರಿಷ್ಕರಿಸುವ ಅವಕಾಶವಿತ್ತು. ಆದರೆ, ಈ ಹೆಚ್ಚಳವು ಮೂಲ ಶುಲ್ಕದ ಶೇ. 100 ಕ್ಕಿಂತ ಹೆಚ್ಚಿರಬಾರದು ಎಂಬ ಷರತ್ತೂ ಇತ್ತು. ಈ ಲೆಕ್ಕಾಚಾರದಂತೆ 2014ರಲ್ಲಿ ಆಗಬೇಕಿದ್ದ ಪರಿಷ್ಕೃತ ಶುಲ್ಕ ಕೇವಲ 2.9 ಕೋಟಿ ರೂಪಾಯಿಗೆ ಸೀಮಿತವಾಗುತ್ತಿತ್ತು.

NDMC ತೆಗೆದುಕೊಂಡ ಕಠಿಣ ಕ್ರಮ

ಪರವಾನಗಿ ನಿಯಮಗಳ ಉಲ್ಲಂಘನೆ ಮತ್ತು ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಶುಲ್ಕ ಬರುತ್ತಿರುವುದನ್ನು ಗಮನಿಸಿದ ಎನ್‌ಡಿಎಂಸಿ, 2020ರ ಫೆಬ್ರವರಿ 13 ರಂದು ಭಾರತ್ ಹೋಟೆಲ್ಸ್‌ಗೆ ಶಾಕ್ ನೀಡಿತ್ತು. 2014ರಿಂದ ಅನ್ವಯವಾಗುವಂತೆ ವಾರ್ಷಿಕ 98 ಕೋಟಿ ರೂಪಾಯಿ ದರದಲ್ಲಿ ಒಟ್ಟು 1,063.74 ಕೋಟಿ ರೂಪಾಯಿಗಳನ್ನು ಬಾಕಿ ಪಾವತಿಸುವಂತೆ ನೋಟಿಸ್ ನೀಡಿತ್ತು. ಅಷ್ಟೇ ಅಲ್ಲದೆ, ಅಂದೇ ಹೋಟೆಲ್‌ನ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿತ್ತು.

ಏಕಸದಸ್ಯ ಪೀಠದ ತೀರ್ಪು ರದ್ದು

ಈ ಮೊದಲು, 2023ರ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಎನ್‌ಡಿಎಂಸಿಯ ನೋಟಿಸ್ ಮತ್ತು ಪರವಾನಗಿ ರದ್ದತಿಯನ್ನು ರದ್ದುಗೊಳಿಸಿ ಭಾರತ್ ಹೋಟೆಲ್ಸ್‌ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಎನ್‌ಡಿಎಂಸಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಮುಖ್ಯ

ತನ್ನ ತೀರ್ಪಿನಲ್ಲಿ ನ್ಯಾಯಾಲಯವು ಬಹಳ ಗಂಭೀರವಾದ ಅಂಶಗಳನ್ನು ಪ್ರಸ್ತಾಪಿಸಿದೆ. "ನವದೆಹಲಿಯ ಭೂಮಿಯು ಅತ್ಯಂತ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ. ಅಂತಹ ಭೂಮಿಯ ವಹಿವಾಟಿನಿಂದ ಎನ್‌ಡಿಎಂಸಿಗೆ ಇಷ್ಟು ದೊಡ್ಡ ಮೊತ್ತದ ನಷ್ಟ ಉಂಟಾದರೆ, ಆ ಹೊರೆ ಅಂತಿಮವಾಗಿ ತೆರಿಗೆದಾರರ ಮೇಲೆ ಬೀಳುತ್ತದೆ. ಇದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಉಲ್ಲಂಘನೆಯಾಗುತ್ತದೆ," ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕೇಂದ್ರ ಸರ್ಕಾರದ ಭೂ ಮತ್ತು ಅಭಿವೃದ್ಧಿ ಕಚೇರಿಯು (L&DO) ಈ ಜಮೀನಿಗೆ ಸಂಬಂಧಿಸಿದಂತೆ ಎನ್‌ಡಿಎಂಸಿಯಿಂದ ವಾರ್ಷಿಕ 98 ಕೋಟಿ ರೂಪಾಯಿಗಳ ಬಾಡಿಗೆಯನ್ನು ಕೇಳುತ್ತಿದೆ. ಅತ್ತ ಭಾರತ್ ಹೋಟೆಲ್ಸ್ ಕೇವಲ 2.9 ಕೋಟಿ ರೂಪಾಯಿ ನೀಡಲು ಮುಂದಾಗಿದೆ. ಇಂತಹ ದೊಡ್ಡ ವ್ಯತ್ಯಾಸವು ಸಾರ್ವಜನಿಕ ಹಣದ ನಷ್ಟಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನಿಯಮಗಳ ಉಲ್ಲಂಘನೆ ಆರೋಪ

ಹೋಟೆಲ್ ಆವರಣದಲ್ಲಿರುವ ಕಚೇರಿ ಸ್ಥಳಗಳನ್ನು ಮಾರಾಟ ಮಾಡಲು ನಡೆಸಿದ ಪ್ರಯತ್ನಗಳು ಸೇರಿದಂತೆ ಹಲವು ಪರವಾನಗಿ ಉಲ್ಲಂಘನೆಗಳೂ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಬ್-ಲೈಸೆನ್ಸಿಗಳು ಕಚೇರಿಗಳನ್ನು ಮಾರಾಟ ಮಾಡಲು ಮುಂದಾಗಿದ್ದು ಸರ್ಕಾರದ ಗಮನಕ್ಕೆ ಬಂದಿತ್ತು.
ಈ ತೀರ್ಪಿನಿಂದಾಗಿ ಈಗ ಎನ್‌ಡಿಎಂಸಿ ತನ್ನ 1,000 ಕೋಟಿ ರೂಪಾಯಿಗಳ ಬಾಕಿಯನ್ನು ವಸೂಲಿ ಮಾಡಲು ಕಾನೂನುಬದ್ಧವಾಗಿ ಮುಂದಡಿಯಿಡಬಹುದಾಗಿದೆ. ಇದು ದೇಶದ ಪ್ರತಿಷ್ಠಿತ ಹೋಟೆಲ್ ಉದ್ಯಮದಲ್ಲಿ ಸಂಚಲನ ಮೂಡಿಸಿದೆ,(ಏಜೆನ್ಸೀಸ್​).