ದೇಶ

ಯುಪಿಯಲ್ಲಿ ಕಾಂಗ್ರೆಸ್​​ಗೆ ಬಿಗ್​ ಶಾಕ್​; 181 ಸೀಟು ಬಯಸಿದ್ದ ಪಕ್ಷಕ್ಕೆ ಕೇವಲ 24 ಸ್ಥಾನ ನೀಡಲು ಮುಂದಾದ್ರಾ ಅಖಿಲೇಶ್ ಯಾದವ್? | Congress

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಗೊಂಡಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ಸ್ಥಾನಗಳ ಹಂಚಿಕ ವಿಚಾರ ಚರ್ಚೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್​​ಗೆ ಸಮಾಜವಾದಿ ಪಕ್ಷ ಆಘಾತ ನೀಡಲು ಮುಂದಾಯ್ತೇ? ಎಂಬ ವಿಚಾರ ಮುನ್ನಲೆಗೆ ಬಂದಿದೆ.

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಗೊಂಡಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ಸ್ಥಾನಗಳ ಹಂಚಿಕ ವಿಚಾರ ಚರ್ಚೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್​​ಗೆ ಸಮಾಜವಾದಿ ಪಕ್ಷ ಆಘಾತ ನೀಡಲು ಮುಂದಾಯ್ತೇ? ಎಂಬ ವಿಚಾರ ಮುನ್ನಲೆಗೆ ಬಂದಿದೆ.

2027ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 181 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸುತ್ತಿದ್ದು, ಅದರಂತೆ ಸ್ಥಾನ ಹಂಚಿಕೆಯ ಭಾಗವಾಗಿ ತನ್ನ ಮಿತ್ರ ಪಕ್ಷ ಸಮಾಜವಾದಿ ಪಕ್ಷಕ್ಕೆ 181 ಸ್ಥಾನಗಳ ಪಟ್ಟಿ ನೀಡಿದೆ. ಆದರೆ ಅಖಿಲೇಶ್ ಯಾದವ್ ನೇತೃತ್ವದ ಎಸ್​ಪಿ ಕೇವಲ 24 ಸ್ಥಾನಗಳನ್ನು ನೀಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 20 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದ ಕ್ಷೇತ್ರಗಳನ್ನು ಆಧರಿಸಿ ಸ್ಥಾನಗಳನ್ನು ನೀಡಲು ಎಸ್​ಪಿ ಯೋಚಿಸುತ್ತಿದೆ ಎನ್ನಲಾಗಿದೆ. ಇಡೀ ರಾಜ್ಯದಲ್ಲಿ 21 ಸ್ಥಾನಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಮತ ಪಡೆದ್ರೆ, ಇತರ ಮೂರು ಕ್ಷೇತ್ರಗಳಲ್ಲಿ 20 ಸಾವಿರ ಮತಗಳ ಸಮೀಪಕ್ಕೆ ಪಡೆದಿರುವುದನ್ನೂ ಸೇರಿಸಿ ಒಟ್ಟು 24 ಸ್ಥಾನಗಳೊಂದಿಗೆ ಚರ್ಚೆ ಆರಂಭಿಸಲು ಸಿದ್ದತೆ ನಡೆಸಿದೆ ಎನ್ನಲಾಗಿದೆ.

ಇದರೊಂದಿಗೆ, ಎರಡೂ ಪಕ್ಷಗಳ ನಡುವಿನ ಸೀಟು ಹಂಚಿಕೆ ಸರಾಗವಾಗಿ ನಡೆಯುವಂತೆ ಕಾಣುತ್ತಿಲ್ಲ, ಚುನಾವಣೆವರೆಗೂ ಹಗ್ಗಾಜಗ್ಗಾಟ ನಡೆಯುವ ಸಾಧ್ಯತೆಯಿದೆ. ಇನ್ನೂ ಸಮಾಜವಾದಿ ಪಕ್ಷವು ಸೀಟು ಹಂಚಿಕೆಗಾಗಿ ವಿಶೇಷ ತಂಡವನ್ನು ರಚಿಸಲಿದೆ. ಈ ತಂಡವು ನವೆಂಬರ್ 23, 24 ಮತ್ತು 25 ರಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಮತ್ತೊಂದೆಡೆ, ಕಾಂಗ್ರೆಸ್ ಯುಪಿ ಸೀಟು ಹಂಚಿಕೆ ವಿಷಯವಾಗಿ ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಐದು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಎಸ್‌ಪಿಯೊಂದಿಗೆ ಚರ್ಚೆ ನಡೆಸಲಿದೆ ಎನ್ನಲಾಗಿದೆ.

403 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 181 ಸ್ಥಾನಗಳನ್ನು ಹಂಚಿಕೆ ಮಾಡಲು ಕಾಂಗ್ರೆಸ್ ಈಗಾಗಲೇ ಎಸ್‌ಪಿಗೆ ಪಟ್ಟಿಯನ್ನು ಸಲ್ಲಿಸಿದೆ. 2022ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು ಸಮಾಜವಾದಿ ಪಕ್ಷವು 111 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು (ಏಜೆನ್ಸೀಸ್).