ಟೀಮ್ ಇಂಡಿಯಾಗೆ ಭಾರಿ ಆಘಾತ: ಕೊಹ್ಲಿ ಬೆನ್ನಲ್ಲೇ ರೋಹಿತ್ ಕೂಡ ಅಫ್ಘಾನ್ ಸರಣಿಯಿಂದ ಔಟ್?
ನವದೆಹಲಿ: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ರನ್ ಮಷಿನ್ ವಿರಾಟ್ ಕೊಹ್ಲಿ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಬಿದ್ದಿರುವ ಬೆನ್ನಲ್ಲೇ, ಮಾಜಿ ನಾಯಕ ಹಾಗೂ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ(Rohit Sharma) ಅವರ ಆಟವೂ ಈಗ ಅನುಮಾನ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವಾಗ ರೋಹಿತ್ ಶರ್ಮಾ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಈಗ ಅದೇ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿರುವುದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ತಲೆನೋವು ತಂದಿದೆ.
ಬೆಂಗಳೂರಿನ ಎನ್‌ಸಿಎನಲ್ಲಿ ಫಿಟ್‌ನೆಸ್ ಪರೀಕ್ಷೆ ಬಾಕಿ
ರೋಹಿತ್ ಶರ್ಮಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇಬ್ಬರನ್ನೂ ಅಫ್ಘಾನಿಸ್ತಾನ ಸರಣಿಯ ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ, ಅವರಿಬ್ಬರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಫಿಟ್‌ನೆಸ್ ಸಾಬೀತುಪಡಿಸಬೇಕಿದೆ.
ಹಾರ್ದಿಕ್ ಪಾಂಡ್ಯ ಈಗಾಗಲೇ ಬೆಂಗಳೂರಿಗೆ ಆಗಮಿಸಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಆದರೆ, ರೋಹಿತ್ ಶರ್ಮಾ ಇನ್ನೂ ಬೆಂಗಳೂರಿನ ಕೇಂದ್ರಕ್ಕೆ ವರದಿ ಮಾಡಿಕೊಂಡಿಲ್ಲ. ಅಲ್ಲಿ ವೈದ್ಯಕೀಯ ತಂಡ ನೀಡುವ ಫಿಟ್‌ನೆಸ್ ಕ್ಲಿಯರೆನ್ಸ್ ಪ್ರಮಾಣಪತ್ರದ ಆಧಾರದ ಮೇಲಷ್ಟೇ ರೋಹಿತ್ ಸರಣಿಯಲ್ಲಿ ಆಡಲಿದ್ದಾರೆಯೇ ಇಲ್ಲವೇ ಎಂಬುದು ಅಂತಿಮವಾಗಲಿದೆ. ಒಂದು ವೇಳೆ ರೋಹಿತ್ ಅಂತಿಮ ಪರೀಕ್ಷೆಯಲ್ಲಿ ಫೇಲ್ ಆದರೆ, ಅವರ ಜಾಗಕ್ಕೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಮರಳಿ ಕರೆಯಿಸಿಕೊಳ್ಳಲು ಆಯ್ಕೆ ಸಮಿತಿ ಚಿಂತನೆ ನಡೆಸಿದೆ. ಜೈಸ್ವಾಲ್ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದರೂ ಅವರನ್ನು 15 ಸದಸ್ಯರ ಈ ಸರಣಿಯ ತಂಡದಿಂದ ಕೈಬಿಡಲಾಗಿತ್ತು.
ಬೌಲಿಂಗ್ ಮಾಡಿದರೆ ಮಾತ್ರ ಹಾರ್ದಿಕ್‌ಗೆ ಚಾನ್ಸ್!
ಮತ್ತೊಂದೆಡೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಅವರು ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಸಂಪೂರ್ಣವಾಗಿ ಬೌಲಿಂಗ್ ಮಾಡಲು ಫಿಟ್ ಆಗಿರಬೇಕು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಐಪಿಎಲ್‌ನಲ್ಲಿ ಬೆನ್ನುನೋವಿನ ಸಮಸ್ಯೆಯಿಂದ ಬಳಲಿದ್ದ ಪಾಂಡ್ಯ ಅವರ ಫಿಟ್‌ನೆಸ್ ಮೇಲೆ ಆಯ್ಕೆಗಾರರು ತೀವ್ರ ನಿಗಾ ಇಟ್ಟಿದ್ದಾರೆ.
ಶುಭ್‌ಮನ್ ಗಿಲ್ ಹೆಗಲಿಗೆ ನಾಯಕತ್ವ: 3 ಹೊಸ ಮುಖಗಳಿಗೆ ಅವಕಾಶ
ಹಿರಿಯ ಆಟಗಾರರ ಗಾಯದ ಸಮಸ್ಯೆಯ ಮಧ್ಯೆಯೇ ಯುವ ಆಟಗಾರ ಶುಭ್‌ಮನ್ ಗಿಲ್ ಈ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಉಪನಾಯಕರಾಗಿದ್ದಾರೆ. ಈ ಸರಣಿಯ ಮೂಲಕ ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಮತ್ತು ಎಡಗೈ ಸ್ಪಿನ್ನರ್ ಹರ್ಷ್ ದುಬೆ ಎಂಬ 3 ಹೊಸ ಯುವ ಪ್ರತಿಭೆಗಳಿಗೆ ಭಾರತ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಜೂನ್ 13 ರಿಂದ ಧರ್ಮಶಾಲಾದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಲಕ್ನೋ ಮತ್ತು ಚೆನ್ನೈನಲ್ಲಿ ಉಳಿದ ಪಂದ್ಯಗಳು ಜರುಗಲಿವೆ.
ಭಾರತ ಏಕದಿನ ತಂಡ: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ,(ಏಜೆನ್ಸೀಸ್).