ಮಮತಾ ಬ್ಯಾನರ್ಜಿ  
ದೇಶ

ಭವಾನಿಪುರದಲ್ಲಿ ದೀದಿಗೆ ಭಾರೀ ಮುಖಭಂಗ! ಸುವೇಂದು ಅಧಿಕಾರಿ ಎದುರು 15,114 ಮತಗಳ ಅಂತರದಲ್ಲಿ ಸೋಲು

ಪ್ರಮುಖ ಮುಖ್ಯಾಂಶಗಳು

  • ಪ.ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ
  • ಭವಾನಿಪುರದಲ್ಲಿ ಸೋಲುಂಡ ದೀದಿ
  • ಸುವೇಂದು ಅಧಿಕಾರಿ ಎದುರು ಗೆದ್ದು ಬೀಗಲು ಮುಗ್ಗರಿಸಿದ ಮಮತಾ ಬ್ಯಾನರ್ಜಿ
Mamata Banerjee: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದ್ದು, ಕಳೆದ 15 ವರ್ಷಗಳಿಂದ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಸದ್ಯ ಭಾರೀ ಮುಖಭಂಗ ಉಂಟಾಗಿದೆ. 
ಭವಾನಿಪುರದಿಂದ ಸ್ಪರ್ಧಿಸಿದ್ದ ಮಮತಾ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಮತ್ತೊಮ್ಮೆ ಸೋಲು ಉಂಡಿದ್ದಾರೆ. ಸುವೇಂದು ವಿರುದ್ಧ ಬರೋಬ್ಬರಿ 15,114 ಮತಗಳ ಅಂತರದಿಂದ ಸೋತಿರುವುದು ಸದ್ಯ ದೀದಿ ಮತ್ತು ಟಿಎಂಸಿಗೆ ದೊಡ್ಡ ಆಘಾತ ತಂದೊಡ್ಡಿದೆ. 
200ಕ್ಕೂ ಅಧಿಕ ಸ್ಥಾನಗಳೊಂದಿಗೆ ಬಿಜೆಪಿ ಭರ್ಜರಿ ಜಯ ಸಾಧಿಸಿದರೆ, ಆಡಳಿತಾರೂಢ ಟಿಎಂಸಿ 72 ಸ್ಥಾನಗಳಿಗೆ ಸೀಮಿತವಾಯಿತು. 2021ರಲ್ಲಿಯೂ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದರು. ಈ ಬಾರಿ ಬಿಜೆಪಿ ಗೆಲುವಿನ ಹೇಳಿಕೆಗೆ ತಿರುಗೇಟು ನೀಡಿದ್ದ ಮಮತಾ, ಟಿಎಂಸಿ ಖಂಡಿತವಾಗಿಯೂ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದೇ ನಿರೀಕ್ಷಿಸಿದ್ದರು. ಆದರೆ, ಲೆಕ್ಕಾಚಾರವು ತಲೆಕೆಳಗಾಯಿತು. 
ಎಣಿಕೆಯ ಆರಂಭದಲ್ಲಿ ಮಮತಾ ಬ್ಯಾನರ್ಜಿ ಮುನ್ನಡೆಯಲ್ಲಿದ್ದರೆ, ಕೊನೆಯ ಕೆಲವು ಸುತ್ತುಗಳಲ್ಲಿ ಅಧಿಕಾರಿ ಮುನ್ನಡೆ ಸಾಧಿಸಿದರು. ಈ ಮಧ್ಯೆ, ಮತಗಟ್ಟೆ ಏಜೆಂಟ್‌ಗಳಿಗೆ ವಾರ್ನಿಂಗ್ ನೀಡಿದ ಮಮತಾ, ಬಿಜೆಪಿ ಮತ್ತು ಚುನಾವಣಾ ಆಯೋಗವು ತಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಮೋಸ ಮಾಡುತ್ತಿದೆ ಎಂದು ಗಂಭೀರ ಆರೋಪ ಹೊರಿಸಿದರು,(ಏಜೆನ್ಸೀಸ್).