ಭಾರತಕ್ಕೆ ಬಿಗ್ ಶಾಕ್..? 2029ರ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ವಿಶ್ವಕಪ್ ಆತಿಥ್ಯ ಕೈತಪ್ಪುವ ಭೀತಿ..! 
ದೇಶ

ಭಾರತಕ್ಕೆ ಬಿಗ್ ಶಾಕ್..? 2029ರ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ವಿಶ್ವಕಪ್ ಆತಿಥ್ಯ ಕೈತಪ್ಪುವ ಭೀತಿ..! India World Cup Hosting

ನವದೆಹಲಿ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬರಸಿಡಿಲಿನಂತಹ ಸುದ್ದಿಯೊಂದು ಕೇಳಿಬರುತ್ತಿದೆ. 2029ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್(India World Cup Hosting) ಪಂದ್ಯಾವಳಿಗಳು ಭಾರತದಿಂದ ಹೊರಹೋಗುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದಕ್ಕೆ ಪ್ರಮುಖ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ರಾಜಕೀಯ ಸ್ಥಿತಿ ಮತ್ತು ಇತ್ತೀಚಿನ ಭದ್ರತಾ ಕಾರಣಗಳಿಂದಾಗಿ ಈ ಮಹತ್ವದ ಬದಲಾವಣೆಯ ಬಗ್ಗೆ ಐಸಿಸಿ (ICC) ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

ವರದಿಯಲ್ಲೇನಿದೆ..?

ಆಸ್ಟ್ರೇಲಿಯಾದ ಪ್ರಮುಖ ಪತ್ರಿಕೆ 'ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ವರದಿಯ ಪ್ರಕಾರ, ದಕ್ಷಿಣ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಮತ್ತು ಭಾರತ-ಪಾಕಿಸ್ತಾನ ನಡುವಿನ ಕ್ರೀಡಾ ಸಂಬಂಧ ಹಳಸಿರುವುದು ವೇಳಾಪಟ್ಟಿ ರೂಪಿಸುವವರಿಗೆ ಮತ್ತು ಪ್ರಸಾರಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಸಂಘರ್ಷಗಳು ಟೂರ್ನಿಯ ಯಶಸ್ಸಿಗೆ ಅಡ್ಡಿಯಾಗಬಹುದು ಎಂಬ ಆತಂಕದಲ್ಲಿರುವ ಐಸಿಸಿ, ಪರ್ಯಾಯ ವೇದಿಕೆಯಾಗಿ ಆಸ್ಟ್ರೇಲಿಯಾವನ್ನು ಪರಿಗಣಿಸುತ್ತಿದೆ.

ವಿವಾದಕ್ಕೆ ಕಾರಣವಾದ ಅಂಶಗಳು

ಬಹಿಷ್ಕಾರದ ಬೆದರಿಕೆ: 2026ರ ಟಿ20 ವಿಶ್ವಕಪ್ ವೇಳೆ ಬಾಂಗ್ಲಾದೇಶ ತಂಡವು ಭಾರತಕ್ಕೆ ಬರಲು ನಿರಾಕರಿಸಿದ ನಂತರ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿತ್ತು. ಇದು ಐಸಿಸಿಗೆ ಸುಮಾರು 250 ಮಿಲಿಯನ್ ಡಾಲರ್ ಆದಾಯ ನಷ್ಟದ ಭೀತಿ ಹುಟ್ಟಿಸಿತ್ತು.
ಹೈಬ್ರಿಡ್ ಮಾದರಿ ಗೊಂದಲ: ಪಾಕಿಸ್ತಾನದಲ್ಲಿ ನಡೆಯಬೇಕಿದ್ದ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತದ ಹಠದ ಮೇರೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿತ್ತು. ಈಗ ಇದೇ ಮಾದರಿಯನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತದಲ್ಲಿ ನಡೆಯುವ ಟೂರ್ನಿಗಳಿಗೂ ಅನ್ವಯಿಸಲು ಒತ್ತಾಯಿಸುತ್ತಿವೆ.
ಭದ್ರತಾ ಸವಾಲುಗಳು: ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ಆಟಗಾರರ ಸುರಕ್ಷತೆ ಮತ್ತು ಪಂದ್ಯಗಳ ಸುಗಮ ನಿರ್ವಹಣೆಯ ಬಗ್ಗೆ ಪ್ರಸಾರಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಮೊದಲ ಆಯ್ಕೆ ಏಕೆ..?

ಆಸ್ಟ್ರೇಲಿಯಾ ಈ ಹಿಂದೆ 2015ರ ವಿಶ್ವಕಪ್ ಮತ್ತು 2022ರ ಟಿ20 ವಿಶ್ವಕಪ್‌ಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿತ್ತು. ಅಲ್ಲದೆ, ಮೆಲ್ಬೋರ್ನ್ ಮತ್ತು ಅಡಿಲೇಡ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯಗಳಿಗೆ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ಸಾಕ್ಷಿಯಾಗಿದ್ದರು. ಆಸ್ಟ್ರೇಲಿಯಾದ ಸಮಯವು ಉಪಖಂಡದ ಪ್ರಸಾರ ಮಾರುಕಟ್ಟೆಗೂ ಪೂರಕವಾಗಿರುವುದರಿಂದ ಐಸಿಸಿ ಅಲ್ಲಿಗೆ ಟೂರ್ನಿ ಸ್ಥಳಾಂತರಿಸಲು ಆಸಕ್ತಿ ತೋರುತ್ತಿದೆ,(ಏಜೆನ್ಸೀಸ್).