ಬಂಗಾಳದಲ್ಲಿ ದೀದಿ ಆಪ್ತರಿಗೆ ಸುವೇಂದು ಬಿಗ್ ಶಾಕ್! ಪೊಲೀಸ್ ವೆಲ್ಫೇರ್ ಬೋರ್ಡ್ ರದ್ದು! ಅದು ಟಿಎಂಸಿಯ ಅಂಗಸಂಸ್ಥೆಯಾಗಿತ್ತು ಎಂದು ಸಿಎಂ ಆಕ್ರೋಶ!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದಶಕಗಳ ಎಡ ಮತ್ತು ತೃಣಮೂಲ ಕಾಂಗ್ರೆಸ್ ಆಡಳಿತದ ಶೈಲಿಯನ್ನು ಬದಲಿಸಲು ಮುಂದಾಗಿರುವ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಶನಿವಾರ ಭಾರಿ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ರಾಜ್ಯದ ಪೊಲೀಸ್ ಕಲ್ಯಾಣ ಮಂಡಳಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಈ ಮಂಡಳಿಯು ತನ್ನ ಮೂಲ ಉದ್ದೇಶದಿಂದ ಸಂಪೂರ್ಣವಾಗಿ ದೂರ ಸರಿದಿದ್ದು, ಕೇವಲ ರಾಜಕೀಯ ಹಿತಾಸಕ್ತಿಗಾಗಿ ಬಳಕೆಯಾಗುತ್ತಿದೆ ಎಂದು ಸಿಎಂ ಗಂಭೀರ ಆರೋಪ ಮಾಡಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಆಡಳಿತಾತ್ಮಕ ಪರಿಶೀಲನಾ ಸಭೆ ನಡೆಸಿದ ನಂತರ ಮುಖ್ಯಮಂತ್ರಿಯವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಹಿಂದೆ ಆಡಳಿತಗಾರರ ಕಾನೂನಿತ್ತು, ಈಗ ಕಾನೂನಿನ ಆಡಳಿತವಿದೆ!
ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ತಮಗೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇಲ್ಲಿ ಕೇವಲ ಆಡಳಿತಗಾರರ ಕಾನೂನು ಚಾಲ್ತಿಯಲ್ಲಿತ್ತು. ಆದರೆ ನಮ್ಮ ಸರ್ಕಾರದಲ್ಲಿ ಕಾನೂನಿನ ಆಡಳಿತ ಮಾತ್ರ ಇರಲಿದೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸುವ ಅಥವಾ ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಶಕ್ತಿಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಕಡಕ್ ವಾರ್ನಿಂಗ್ ನೀಡಿದ್ದಾರೆ.
ಮಂಡಳಿಯ ರದ್ದತಿಯನ್ನು ಸಮರ್ಥಿಸಿಕೊಂಡ ಸಿಎಂ ಸುವೇಂದು, ಪೊಲೀಸ್ ಕಲ್ಯಾಣ ಮಂಡಳಿಯನ್ನು ಆರಂಭದಲ್ಲಿ ಒಳ್ಳೆಯ ಉದ್ದೇಶದಿಂದಲೇ ಸ್ಥಾಪಿಸಲಾಗಿತ್ತು. ಆದರೆ ದಿನ ಕಳೆದಂತೆ ಅದು ಮಾಜಿ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ಒಂದು ರಾಜಕೀಯ ಅಂಗಸಂಸ್ಥೆಯಾಗಿ ಬದಲಾಯಿತು. ಇದರಿಂದ ಸಾಮಾನ್ಯ ಪೊಲೀಸರ ಕಲ್ಯಾಣಕ್ಕೆ ಎಷ್ಟು ಸಹಾಯವಾಯಿತೋ ನನಗೊತ್ತಿಲ್ಲ, ಆದರೆ ಪ್ರಭಾವಿಗಳಿಗೆ ಕಾನೂನುಬಾಹಿರವಾಗಿ ಉದ್ಯೋಗ ವಿಸ್ತರಣೆ ಪಡೆಯುವ ಮತ್ತು ವೈಯಕ್ತಿಕ ಲಾಭ ಮಾಡಿಕೊಳ್ಳುವ ಅಡ್ಡೆಯಾಗಿ ಇದು ಮಾರ್ಪಟ್ಟಿತ್ತು. ಹಾಗಾಗಿ ಇಂತಹ ಮಂಡಳಿ ನಮಗೆ ಬೇಡ ಎಂದು ದೀದಿ ಪಕ್ಷದ ವಿರುದ್ಧ ಹರಿಹಾಯ್ದರು.
ಮಹಿಳಾ ಪೊಲೀಸರಿಗೆ ಸಿಎಂ ಸುವೇಂದು ಬಿಗ್ ಗಿಫ್ಟ್!
ಇದೇ ಆಡಳಿತಾತ್ಮಕ ಸಭೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸುವೇಂದು ಅಧಿಕಾರಿ ಭಾರಿ ಸೌಲತ್ತು ಪ್ರಕಟಿಸಿದ್ದಾರೆ. ಮಹಿಳಾ ಅಧಿಕಾರಿಗಳು ತಮ್ಮ ವೃತ್ತಿಪರ ಜೀವನ ಮತ್ತು ಕೌಟುಂಬಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುವಂತೆ, ಅವರಿಗೆ ಅವರ ಸ್ವಂತ ಜಿಲ್ಲೆಗಳಲ್ಲೇ ಪೋಸ್ಟಿಂಗ್ ನೀಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಮಹಿಳಾ ಪೊಲೀಸ್ ವಲಯದಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಗಡಿ ನುಸುಳುವಿಕೆ ಮತ್ತು ಹಫ್ತಾ ವಸೂಲಿಗೆ ಕಠಿಣ ಬ್ರೇಕ್
ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದ ನದಿ ತೀರದ ಪ್ರದೇಶಗಳಲ್ಲಿ ಕಣ್ಗಾವಲು ಮತ್ತು ಗಡಿ ಜಾಗರೂಕತೆಯನ್ನು ಮತ್ತಷ್ಟು ಬಲಪಡಿಸುವಂತೆ ಸಭೆಯಲ್ಲಿದ್ದ ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ನುಸುಳುವಿಕೆಗೆ ಅವಕಾಶ ನೀಡಬಾರದು ಎಂದು ಆದೇಶಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ವ್ಯಾಪಕವಾಗಿರುವ ಹಫ್ತಾ ವಸೂಲಿ ಮತ್ತು ಸುಲಿಗೆ ದಂಧೆಯ ವಿರುದ್ಧ ಸಮರ ಸಾರಿರುವ ಮುಖ್ಯಮಂತ್ರಿಯವರು, ಆಟೋ ರಿಕ್ಷಾ ಮತ್ತು ಟೋಟೋ ಚಾಲಕರಿಂದ ಕಾನೂನುಬಾಹಿರವಾಗಿ ಹಣ ವಸೂಲಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಇಂತಹ ಸುಲಿಗೆಗಳ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ದೂರು ನೀಡಬಹುದು. ದೂರು ಬಂದ ತಕ್ಷಣ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದ್ದಾರೆ. ಈ ವರ್ಚುವಲ್ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ಉನ್ನತ ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು,(ಏಜೆನ್ಸೀಸ್).