ಪಟನಾ: ಬಿಹಾರ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ತಿರ್ಹುತ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಕೇವಲ 24 ಗಂಟೆಗಳಲ್ಲಿ ಪ್ರಮುಖ ಶಿಕ್ಷಕ ನಾಯಕ ಭೂಷಣ್ ಝಾ (Bhushan Jha) ಪಕ್ಷ ತೊರೆದಿದ್ದಾರೆ. ಇದೀಗ ಅವರು ಅದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಮುಜಫರ್‌ಪುರದ ಮಾಡಿಪುರದಲ್ಲಿರುವ ಹೋಟೆಲ್‌ನಲ್ಲಿ ಸೆಪ್ಟೆಂಬರ್ 25 ರಂದು ಪ್ರಶಾಂತ್ ಕಿಶೋರ್ ಅವರ ಸಮ್ಮುಖದಲ್ಲಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯ ನಂತರ ಭೂಷಣ್ ಝಾ ತಮ್ಮ ರಾಜೀನಾಮೆ ನಿರ್ಧಾರವನ್ನು ತಿಳಿಸಿದರು.
ಪಕ್ಷ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ ಝಾ, ಸಭೆಯಲ್ಲಿ ತಮ್ಮ ಹಾಗೂ ತಮ್ಮನ್ನು ಬೆಂಬಲಿಸಿದ ಶಿಕ್ಷಕರ ಜೊತೆ ನಡೆದ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ತಾವು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ಜೊತೆಯಲ್ಲಿದ್ದ ಶಿಕ್ಷಕರು ವಿಡಿಯೋ ರೆಕಾರ್ಡಿಂಗ್ ಮಾಡದಂತೆ ತಡೆಯಲಾಯಿತು ಮತ್ತು ಪಕ್ಷವು ಈಗಾಗಲೇ ನಿಗದಿಪಡಿಸಿದ ವಿಷಯಗಳನ್ನಷ್ಟೇ ಮಾತನಾಡುವಂತೆ ತಮ್ಮ ಮೇಲೆ ಒತ್ತಡ ಹೇರಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಪ್ರಬಲವಾಗಿ ಆಕ್ಷೇಪಿಸಿದ ಝಾ, ಜೊತೆಗಿದ್ದ ಶಿಕ್ಷಕ ಸಹೋದ್ಯೋಗಿಗಳ ಸಲಹೆಯಂತೆ ಜನ ಸುರಾಜ್ ಪಕ್ಷವನ್ನು ತೊರೆದು ಪಕ್ಷೇತರರಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಅಲ್ಲದೆ, ಸಭೆಯಲ್ಲಿ ಪ್ರಶಾಂತ್ ಕಿಶೋರ್ ತಮ್ಮ ಭಾಷಣದಲ್ಲಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ಉಲ್ಲೇಖಿಸಲಿಲ್ಲ ಎಂದೂ ಅವರು ದೂರಿದ್ದಾರೆ.
ಬಿಹಾರ ವಿಧಾನ ಪರಿಷತ್ತಿನ ಎಂಟು ಸ್ಥಾನಗಳಿಗೆ ಅಕ್ಟೋಬರ್ 23 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 27 ರಂದು ಮತ ಎಣಿಕೆ ನಡೆಯಲಿದೆ. ಜನ ಸುರಾಜ್ ಪಕ್ಷವು ಸೆಪ್ಟೆಂಬರ್ 20 ರಂದು 5 ಸ್ಥಾನಗಳಿಗೆ ಹಾಗೂ ಗುರುವಾರ (ಸೆಪ್ಟೆಂಬರ್ 24) ಉಳಿದ 3 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು.
ಪಟನಾ ಪದವೀಧರ ಕ್ಷೇತ್ರ: ಅನುಜ್ ಸಿಂಗ್
ಪಟನಾ ಶಿಕ್ಷಕರ ಕ್ಷೇತ್ರ: ದಿವ್ಯಾ ಜ್ಯೋತಿ
ತಿರ್ಹುತ್ ಪದವೀಧರ ಕ್ಷೇತ್ರ: ಡಾ. ವಿಮೋಹನ್ ಕುಮಾರ್
ತಿರ್ಹುತ್ ಶಿಕ್ಷಕರ ಕ್ಷೇತ್ರ: ಭೂಷಣ್ ಝಾ ರಾಜೀನಾಮೆಯಿಂದಾಗಿ ಪ್ರಸ್ತುತ ಖಾಲಿ
ದರ್ಬಂಗಾ ಪದವೀಧರ ಕ್ಷೇತ್ರ: ರವೀಂದ್ರ ಯಾದವ್
ದರ್ಬಂಗಾ ಶಿಕ್ಷಕರ ಕ್ಷೇತ್ರ: ಎಸ್‌ಪಿ ರಾಯ್
ಕೋಸಿ ಪದವೀಧರ ಕ್ಷೇತ್ರ: ರಜನೀಶ್ ರಂಜನ್
ಸಾರಣ್ ಶಿಕ್ಷಕರ ಕ್ಷೇತ್ರ: ಅಫಾಕ್ ಅಹ್ಮದ್
ಭೂಷಣ್ ಝಾ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದರಿಂದ, ಶನಿವಾರ ತಿರ್ಹುತ್ ಶಿಕ್ಷಕರ ಕ್ಷೇತ್ರಕ್ಕೆ ಜನ ಸುರಾಜ್ ಪಕ್ಷವು ಹೊಸ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆ(ಏಜೆನ್ಸೀಸ್).