ಮುಂಬೈ: ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೂ ಮುನ್ನವೇ ಹಲವಾರು ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಕುರಿತು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು. ಆಯ್ಕೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಅರ್ಜಿಯಲ್ಲೇನಿತ್ತು..?
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ನಾಯಕ ಅವಿನಾಶ್ ಜಾಧವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಮತದಾನ ನಡೆಸದೆ ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸುವುದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದರು. ಕೆಲವು ವಾರ್ಡ್‌ಗಳಲ್ಲಿ ಇತರ ಅಭ್ಯರ್ಥಿಗಳು ಒತ್ತಡ ಅಥವಾ ಪ್ರಚೋದನೆಗಳಿಂದಾಗಿ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ಆರೋಪಗಳನ್ನು ತಿರಸ್ಕರಿಸಿದ ನ್ಯಾಯಾಲಯ
ಬಾಂಬೆ ಹೈಕೋರ್ಟ್ ಅವರ ಆರೋಪಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಅರ್ಜಿದಾರರು ತಾವು ಮಾಡಿರುವ ಆರೋಪಗಳನ್ನು ಬೆಂಬಲಿಸಲು ದೃಢ ಮತ್ತು ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಚುನಾವಣಾ ಪ್ರಕ್ರಿಯೆಯನ್ನು ಕಾನೂನಿನ ಪ್ರಕಾರವೇ ನಡೆಸಲಾಗುತ್ತಿದ್ದು, ನ್ಯಾಯಾಲಯವು ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಒಂದು ವಾರ್ಡ್‌ನ ಕಣದಲ್ಲಿ ಒಬ್ಬನೇ ಒಬ್ಬ ಅರ್ಹ ಅಭ್ಯರ್ಥಿ ಉಳಿದಿದ್ದರೆ, ಆ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆಯಾದವರು ಎಂದು ಘೋಷಿಸುವುದು ಚುನಾವಣಾ ಕಾನೂನುಗಳಿಗೆ ಅನುಗುಣವಾಗಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಪ್ರಸ್ತುತ ಚೌಕಟ್ಟಿನ ಅಡಿಯಲ್ಲಿ ಈ ಪದ್ಧತಿಗೆ ಕಾನೂನುಬದ್ಧವಾಗಿ ಅವಕಾಶವಿದೆ. ಭವಿಷ್ಯದಲ್ಲಿ ಅಂತಹ ವಿಷಯಗಳಲ್ಲಿ ಜವಾಬ್ದಾರಿಯುತವಾಗಿ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸಲಹೆ ನೀಡಿದೆ(ಏಜೆನ್ಸೀಸ್).