ಎಲ್​ಪಿಜಿ ಬಿಕ್ಕಟ್ಟು  
ದೇಶ

ಎಲ್​ಪಿಜಿ ಬಿಕ್ಕಟ್ಟಿಗೆ ಬಿಗ್ ರಿಲೀಫ್​! ಇಂದು ನಂದಾದೇವಿ ಆಗಮನ

ನವದೆಹಲಿ: ದೇಶಾದ್ಯಂತ ಎಲ್​ಪಿಜಿ ಕೊರತೆಯಿಂದಾಗಿ ಹೋಟೆಲ್ ಉದ್ಯಮ ಹಾಗೂ ಗೃಹಬಳಕೆದಾರರು ತೀವ್ರ ಸಂಕಷ್ಟ ಎದುರಿಸುತ್ತಿರುವ ಹೊತ್ತಿನಲ್ಲೇ ದೊಡ್ಡ ರಿಲೀಫ್ ಸಿಕ್ಕಿದೆ. ಕತಾರ್​ನಿಂದ ಹೊರಟಿದ್ದ ಭಾರತದ ‘ಶಿವಾಲಿಕ್’ ಎಲ್​ಪಿಜಿ ಹಡಗು, ಅತ್ಯಂತ ಸೂಕ್ಷ್ಮಾದ ಹಾಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಸೋಮವಾರ ಗುಜರಾತ್​ನ ಮುಂದ್ರಾ ಬಂದರನ್ನು ಸುರಕ್ಷಿತವಾಗಿ ತಲುಪಿದೆ ಎಂದು ಬಂದರು ಸಚಿವಾಲಯದ ಅಧಿಕಾರಿ ರಾಜೇಶ್ ಕುಮಾರ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

ಈ ಹಡಗು ಸುಮಾರು 45,000 ಮೆಟ್ರಿಕ್ ಟನ್ ಎಲ್​ಪಿಜಿ ಹೊತ್ತು ತಂದಿದ್ದು, ಇದರಿಂದ ವಾಣಿಜ್ಯ ಮತ್ತು ಗೃಹಬಳಕೆಯ ಇಂಧನ ಪೂರೈಕೆಯಲ್ಲಿನ ವ್ಯತ್ಯಯ ತುಸು ಶಮನವಾಗಲಿದೆ. ಶಿಪ್ಪಿಂಗ್ ಕಾರ್ಪೆರೇಷನ್​ಗೆ ಸೇರಿದ ಮತ್ತೊಂದು ಹಡಗು ‘ನಂದಾದೇವಿ’ ಮಂಗಳವಾರ ಮುಂಜಾನೆ ಕಾಂಡ್ಲಾ ಬಂದರಿಗೆ ತಲುಪಲಿದ್ದು, ಎರಡೂ ಹಡಗುಗಳಿಂದ ಒಟ್ಟಾರೆ 92,700 ಮೆಟ್ರಿಕ್ ಟನ್ ಎಲ್​ಪಿಜಿ ಭಾರತಕ್ಕೆ ಲಭ್ಯವಾಗಲಿದೆ. ಯುಎಇಯಿಂದ 81,000 ಟನ್ ಕಚ್ಚಾ ತೈಲ ಹೊತ್ತಿರುವ ‘ಜಗ್ ಲಾಡ್ಕಿ’ ಹಡಗು ಕೂಡ ಮುಂದ್ರಾ ಬಂದರಿನತ್ತ ಸುರಕ್ಷಿತವಾಗಿ ಧಾವಿಸುತ್ತಿದೆ. ಪರ್ಷಿಯನ್ ಕೊಲ್ಲಿಯಲ್ಲಿರುವ ಒಟ್ಟು 22 ಭಾರತೀಯ ಹಡಗುಗಳು ಹಾಗೂ ಅದರಲ್ಲಿರುವ 611 ನಾವಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚಾಬಹರ್ ಬಳಿ ಅಮೆರಿಕದ ದಾಳಿ

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ 17ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್​ನ ಆಗ್ನೇಯ ಭಾಗದಲ್ಲಿರುವ ‘ಚಾಬಹಾರ್ ಮುಕ್ತ ವ್ಯಾಪಾರ ವಲಯ’ದ ಸಮೀಪವಿರುವ ಸೇನಾ ನೆಲೆಗಳ ಮೇಲೆ ಅಮೆರಿಕದ ಯುದ್ಧವಿಮಾನಗಳು ಭಾರಿ ದಾಳಿ ನಡೆಸಿವೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಸರಣಿ ಸ್ಪೋಟಗಳ ಸದ್ದು ಕೇಳಿಬಂದಿದೆ ಎಂದು ವರದಿಗಳು ತಿಳಿಸಿವೆ. ಚಾಬಹಾರ್ ಇರಾನ್​ನ ಏಕೈಕ ಸಾಗರ ಬಂದರಾಗಿದ್ದು, ಪ್ರಸ್ತುತ ನಿರ್ಬಂಧಕ್ಕೊಳಗಾಗಿರುವ ಹಾಮುಜ್ ಜಲಸಂಧಿಯನ್ನು ಪ್ರವೇಶಿಸದೆ ನೇರವಾಗಿ ಹಿಂದೂ ಮಹಾಸಾಗರವನ್ನು ಸಂರ್ಪಸುತ್ತದೆ. ಈ ಬಂದರಿನ ಶಾಹಿದ್ ಬೆಹೆಶ್ತಿ ಟರ್ವಿುನಲ್ ಕಾರ್ಯåಚರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರತವು ಇರಾನ್ ಜತೆ 2024ರ ಮೇ ತಿಂಗಳಲ್ಲಿ, 10 ವರ್ಷಗಳ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಕೇವಲ 72 ಕಿ.ಮೀ. ದೂರದಲ್ಲಿರುವ ಪಾಕಿಸ್ತಾನದ ಚೀನಾ ಬೆಂಬಲಿತ ಗ್ವಾದರ್ ಬಂದರಿಗೆ ಪ್ರತಿಯಾಗಿ ಭಾರತದ ಪ್ರಾದೇಶಿಕ ಕಾರ್ಯತಂತ್ರದ ದೖಷ್ಟಿಯಿಂದ ಇದು ಅತ್ಯಂತ ಪ್ರಮುಖವಾಗಿದೆ. ಹಾಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಇರುವುದರಿಂದ ತೈಲ ಆಮದಿಗೆ ಚಾಬಹಾರ್ ಬಂದರು ಭಾರತಕ್ಕೆ ಬಹುಮುಖ್ಯ ಪರ್ಯåಯ ಮಾರ್ಗವಾಗಿ ಒದಗಿಬರಲಿದೆ. ಅಮೆರಿಕದ ನಿರ್ಬಂಧಗಳ ನಡುವೆಯೂ ಈ ಬಂದರಿನ ಅಭಿವೃದ್ಧಿ ಕಾರ್ಯಗಳು ಮುಂದುವರಿದಿವೆ.

ನಿರಂತರ ಮಾತುಕತೆಯ ಸಕಾರಾತ್ಮಕ ಫಲಿತಾಂಶ

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ನಿರ್ಬಂಧಕ್ಕೊಳಗಾಗಿರುವ ಹಾಮುಜ್ ಜಲಸಂಧಿಯನ್ನು ಭಾರತದ 2 ಎಲ್​ಪಿಜಿ ಟ್ಯಾಂಕರ್​ಗಳು ಸುರಕ್ಷಿತವಾಗಿ ದಾಟಿದ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ‘ಇದು ನಮ್ಮ ನಿರಂತರ ಮಾತುಕತೆಯ ಸಕಾರಾತ್ಮಕ ಫಲಿತಾಂಶ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಭಾರತ-ಇರಾನ್ ಐತಿಹಾಸಿಕ ಸಂಬಂಧವೇ ಈ ಮಾತುಕತೆಗೆ ಆಧಾರ. ಇದರಲ್ಲಿ ಯಾವುದೇ ರೀತಿಯ ಕೊಡá-ಕೊಳ್ಳುವಿಕೆ ನಡೆದಿಲ್ಲ.

ಇದ್ಯಾವುದೇ ಸಾರಾಸಗಟು ಒಪ್ಪಂದವಲ್ಲ, ಪ್ರತಿ ಹಡಗಿನ ಸಂಚಾರದ ಬಗ್ಗೆಯೂ ಪ್ರತ್ಯೇಕವಾಗಿ ಮಾತನಾಡಬೇಕಿದೆ’ ಎಂದು ಸಂದರ್ಶನವೊಂದರಲ್ಲಿ ಜೈಶಂಕರ್ ತಿಳಿಸಿದ್ದಾರೆ. ಅಲ್ಲದೆ, ಈ ಸಮರ ಸಂಘರ್ಷವನ್ನು ಅತ್ಯಂತ ದುರದೃಷ್ಟಕರ ಎಂದೂ ಹೇಳಿದ್ದಾರೆ. ಇಂಧನ ಸಾಗಣೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆ ಚರ್ಚಿಸಿದ ಬೆನ್ನಲ್ಲೇ ಸುಮಾರು 92,700 ಮೆಟ್ರಿಕ್ ಟನ್ ಎಲ್​ಪಿಜಿ ಹೊತ್ತಿದ್ದ ಶಿವಾಲಿಕ್ ಮತ್ತು ನಂದಾದೇವಿ ಹಡಗುಗಳು ಜಲಸಂಧಿ ದಾಟಿದವು ಎಂದಿದ್ದಾರೆ.

ಎಲ್​ಪಿಜಿ ಎಲ್ಲೂ ಖಾಲಿಯಾಗಿಲ್ಲ

ಭಾರತದಲ್ಲಿ ಎಲ್​ಪಿಜಿ ಬಿಕ್ಕಟ್ಟು ಆತಂಕಕಾರಿಯಾಗಿದೆ. ಆದರೂ ದೇಶದ ಯಾವುದೇ ಭಾಗದಲ್ಲಿ ಇಂಧನ ಖಾಲಿಯಾದ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ದೇಶದಲ್ಲಿ ಸಿಎನ್​ಜಿ ಮತ್ತು ಪಿಎನ್​ಜಿ ಪೂರೈಕೆ ಶೇ.100ರಷ್ಟಿದೆ. ಗೃಹಬಳಕೆ ಗ್ರಾಹಕರಿಗೆ ನಿರಂತರ ಎಲ್​ಪಿಜಿ ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದ್ದು, ವಾಣಿಜ್ಯ ಬಳಕೆ ಗ್ಯಾಸ್ ವಿತರಣೆ ಭಾಗಶಃ ಪುನರಾರಂಭಿಸಲಾಗಿದೆ. ಅಕ್ರಮ ದಾಸ್ತಾನು ತಡೆಯಲು ಸಭೆ ನಡೆಸಲಾಗಿದೆ. ಕಚ್ಚಾ ತೈಲ ಸಾಕಷ್ಟು ಪ್ರಮಾಣದಲ್ಲಿದ್ದು, ಎಲ್ಲ ಸಂಸ್ಕರಣಾಗರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಎಲ್ಲೂ ಇಂಧನ ಖಾಲಿಯಾದ ವರದಿಯಾಗಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿ ಸುಜಾತಾ ಶಮಾ ತಿಳಿಸಿದ್ದಾರೆ.

ಫುಜೇರಾದಲ್ಲಿ ತೈಲ ಕಾರ್ಯಾಚರಣೆ ಸ್ಥಗಿತ

ಯುದ್ಧದ ಪರಿಣಾಮವಾಗಿ ಗಲ್ಪ್ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ತೀವ್ರವಾಗುತ್ತಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ನ ಪ್ರಮುಖ ತೈಲ ರಫ್ತು ಕೇಂದ್ರವಾದ ಫುಜೇರಾ ಬಂದರಿನ ಮೇಲೆ ನಡೆದ ದಾಳಿಯಿಂದಾಗಿ ತೈಲ ಲೋಡಿಂಗ್ ಕಾರ್ಯåಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಟರ್ವಿುನಲ್ ಮೇಲೆ ಡ್ರೋನ್ ದಾಳಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಫುಜೇರಾ ಬಂದರಿನ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಹಾಮುಜ್ ಜಲಸಂಧಿಯ ಹೊರಭಾಗದಲ್ಲಿರುವ ಈ ಬಂದರು ಮಧ್ಯಪ್ರಾಚ್ಯದ ಅತ್ಯಂತ ಪ್ರಮುಖ ಇಂಧನ ಕೇಂದ್ರವಾಗಿದೆ. ಈ ದಾಳಿಯಿಂದ ಜಾಗತಿಕ ಇಂಧನ ಪೂರೈಕೆ ಜಾಲಕ್ಕೆ ಭಾರಿ ಹೊಡೆತ ಬಿದ್ದಿದ್ದು, ಬಿಕ್ಕಟ್ಟು ಹೀಗೇ ಮುಂದುವರಿದರೆ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ.

ಖಾರ್ಗ್ ದ್ವೀಪ ವಶಕ್ಕೆ ಅಮೆರಿಕ ಸೈನ್ಯ ರವಾನೆ?

ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ತೈಲ ಬಿಕ್ಕಟ್ಟಿನ ನಡುವೆ ಇರಾನ್​ನ ಬಹುಪಾಲು ಕಚ್ಚಾ ತೈಲ ರಫ್ತನ್ನು ನಿರ್ವಹಿಸುವ ಪ್ರಮುಖ ‘ಖಾರ್ಗ್ ದ್ವೀಪ’ವನ್ನು ವಶಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸುತ್ತಿದ್ದಾರೆ. ಹಾಮುಜ್ ಜಲಸಂಧಿಯಲ್ಲಿನ ದಿಗ್ಬಂಧನವನ್ನು ಅಂತ್ಯಗೊಳಿಸಲು ಹಾಗೂ ಇರಾನ್ ಆಡಳಿತಕ್ಕೆ ಆರ್ಥಿಕವಾಗಿ ಭಾರಿ ಹೊಡೆತ ನೀಡಲು, ಅಮೆರಿಕ ಸೇನೆಯನ್ನು ದ್ವೀಪಕ್ಕೆ ಇಳಿಸಲು ಟ್ರಂಪ್ ಒಲವು ತೋರಿದ್ದಾರೆ ಎಂದು ‘ಆಕ್ಸಿಯೋಸ್’ ವರದಿ ಮಾಡಿದೆ.

ಖಾರ್ಗ್ ದ್ವೀಪವನ್ನು ಇರಾನ್​ನ ‘ಕಿರೀಟದ ರತ್ನ’ ಎಂದು ಕರೆದಿರುವ ಟ್ರಂಪ್, ಇನ್ನಷ್ಟು ಬಾರಿ ದಾಳಿ ನಡೆಸಬಹುದು ಎಂದು ಹೇಳಿದ್ದಾರೆ. ಖಾರ್ಗ್ ದ್ವೀಪದ ಮೇಲೆ ನಿಯಂತ್ರಣ ಸಾಧಿಸಿದರೆ ಯುದ್ಧದ ಹಣೆಬರಹವನ್ನೇ ಬದಲಾಯಿಸಬಹುದು ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಕೂಡ ಈ ಆಲೋಚನೆಯನ್ನು ಸ್ವಾಗತಿಸಿ ದ್ದಾರೆ. ಅಮೆರಿಕದ ಈ ನಡೆ ಇರಾನ್​ನ ತೀವ್ರ ಪ್ರತಿದಾಳಿಗೆ ಕಾರಣವಾಗುವ ಅಪಾಯವಿದೆ.

ಇಸ್ರೇಲ್ ನಿಲುವು: ಅಮೆರಿಕ ಅಥವಾ ಇಸ್ರೇಲ್ ಸದ್ಯಕ್ಕೆ ಇರಾನ್ ಮೇಲೆ ನೇರ ಸೇನಾ ಆಕ್ರಮಣ ಮಾಡುವ ಉದ್ದೇಶ ಹೊಂದಿಲ್ಲ ಎಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೇನ್ ಅಜರ್ ಸ್ಪಷ್ಟಪಡಿಸಿದ್ದಾರೆ.

ಡಾನ್ಸಿಂಗ್ ಕ್ಷಿಪಣಿ ಬಳಕೆ

ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ ಇದೇ ಮೊದಲ ಬಾರಿಗೆ ತನ್ನ ಅತ್ಯಂತ ಶಕ್ತಿಶಾಲಿ ಸೆಜ್ಜಿಲ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿದೆ. ಇದನ್ನು ‘ಡ್ಯಾನ್ಸಿಂಗ್ ಮಿಸೈಲ್’ ಎಂದೂ ಕರೆಯಲಾಗುತ್ತದೆ. ಇದು ಘನಇಂಧನಚಾಲಿತ, ಎರಡು ಹಂತದ ಮಧ್ಯಮ ಶ್ರೇಣಿ ಕ್ಷಿಪಣಿಯಾಗಿದ್ದು, 2,000 ಕಿ.ಮೀ. ವರೆಗಿನ ಗುರಿ ತಲುಪಬಲ್ಲದು ಹಾಗೂ 700 ಕೆ.ಜಿ. ಸ್ಪೋಟಕಗಳನ್ನು ಹೊತ್ತೊಯ್ಯಬಲ್ಲದು. ಹಳೇ ದ್ರವ ಇಂಧನದ ಕ್ಷಿಪಣಿಗಳಿಗಿಂತ ಅತಿ ವೇಗವಾಗಿ ಉಡಾವಣೆಗೆ ಸಿದ್ಧಗೊಳಿಸಬಹುದು ಮತ್ತು ಕೇವಲ ನಿಮಿಷಗಳಲ್ಲಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.