Lalu Prasad Yadav | ಮೇವು ಹಗರಣದಲ್ಲಿ ಲಾಲು ಯಾದವ್‌ಗೆ ಬಿಗ್ ರಿಲೀಫ್!
ಪಟನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ದೇವ್‌ಘರ್ ಮೇವು ಹಗರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಜಾರ್ಖಂಡ್ ಹೈಕೋರ್ಟ್ ಲಾಲು ಯಾದವ್‌ಗೆ (Lalu Prasad Yadav) ನೀಡಿದ್ದ ಜಾಮೀನು ಮತ್ತು ಅವರ ಶಿಕ್ಷೆಯ ತಡೆಯಾಜ್ಞೆಯನ್ನು ರದ್ದುಗೊಳಿಸಲು ಸಿಬಿಐ (CBI) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಹಾಗೂ ಪಿ ಬಿ ವರಾಳೆ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಜಾರ್ಖಂಡ್ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಸಿಬಿಐ ಮೇಲ್ಮನವಿ ಸಲ್ಲಿಸಿ ಹಲವು ವರ್ಷಗಳು ಕಳೆದಿರುವುದರಿಂದ ಹಾಗೂ ಜಾಮೀನು ನೀಡಿ ದೀರ್ಘಾವಧಿಯಾಗಿರುವುದರಿಂದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಕೋರ್ಟ್ ಒಪ್ಪಲಿಲ್ಲ. ಬದಲಿಗೆ, ಹೈಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರಣೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಿದೆ.
ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ
ಸಿಬಿಐ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು, ಲಾಲು ಯಾದವ್ ಅವರ ಜಾಮೀನು ಅರ್ಜಿಯನ್ನು ಹಿಂದೆ ಎರಡು ಬಾರಿ ತಿರಸ್ಕರಿಸಲಾಗಿತ್ತು. ಅವರು ಶೇಕಡಾ 50ರಷ್ಟು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂಬ ತಪ್ಪಾದ ಲೆಕ್ಕಾಚಾರದ ಆಧಾರದ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ. ಅವರಿಗೆ ವಿಧಿಸಲಾದ ಶಿಕ್ಷೆಗಳು ಒಂದರ ನಂತರ ಒಂದರಂತೆ ಜಾರಿಯಾಗಬೇಕಿತ್ತೇ ಹೊರತು ಒಟ್ಟೊಟ್ಟಿಗೆ ಅಲ್ಲ ಎಂಬುದನ್ನು ಪರಿಗಣಿಸದೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ವಾದಿಸಿದರು.
ಇತ್ತ ಲಾಲು ಯಾದವ್ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಶಿಕ್ಷೆಗಳು ಒಟ್ಟೊಟ್ಟಿಗೆ ನಡೆಯಬೇಕೇ ಅಥವಾ ಒಂದರ ನಂತರ ಒಂದೇ ಎಂಬ ವಾದವು ಅಂತಿಮ ತೀರ್ಪಿನ ಹಂತದಲ್ಲಿ ಬರಲಿದೆಯೇ ಹೊರತು, ಮಧ್ಯಂತರ ಶಿಕ್ಷೆ ತಡೆಯಾಜ್ಞೆ ಮತ್ತು ಜಾಮೀನು ನೀಡುವ ಹಂತದಲ್ಲಲ್ಲ ಎಂದು ಪ್ರತಿವಾದ ಮಂಡಿಸಿದರು.
ಹೈಕೋರ್ಟ್‌ಗೆ ಶೀಘ್ರ ವಿಚಾರಣೆಯ ನಿರ್ದೇಶನ
ವಾದ ಮತ್ತು ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಜಾಮೀನು ರದ್ದುಗೊಳಿಸುವುದಕ್ಕಿಂತ ಮೂಲ ಮೇಲ್ಮನವಿಗಳ ವಿಚಾರಣೆಯನ್ನು ವೇಗಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು. ಹೀಗಾಗಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಈ ಪ್ರಕರಣದ ಅಂತಿಮ ಮೇಲ್ಮನವಿ ವಿಚಾರಣೆಯನ್ನು ಆದ್ಯತೆಯ ಮೇಲೆ ಶೀಘ್ರದಲ್ಲೇ ಮುಗಿಸುವಂತೆ ಜಾರ್ಖಂಡ್ ಹೈಕೋರ್ಟ್‌ಗೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ
ಮೇವು ಹಗರಣ ಪ್ರಕರಣದಲ್ಲಿ ಅಕ್ರಮವಾಗಿ 89.27 ಲಕ್ಷ ರೂ. ಹಿಂಪಡೆದಿದ್ದಕ್ಕಾಗಿ ಸಿಬಿಐ ವಿಶೇಷ ಕೋರ್ಟ್ ಲಾಲು ಯಾದವ್‌ಗೆ ಶಿಕ್ಷೆ ವಿಧಿಸಿತ್ತು. ಜಾರ್ಖಂಡ್ ಹೈಕೋರ್ಟ್ ಅವರು ಅರ್ಧದಷ್ಟು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದಾರೆಂಬ ಆಧಾರದ ಮೇಲೆ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು(ಏಜೆನ್ಸೀಸ್).