ಚೆನ್ನೈ: ಕಳೆದ ವರ್ಷ ತಮಿಳುನಾಡಿನ ಕರೂರ್‌ನಲ್ಲಿ ನಡೆದ ರಾಜಕೀಯ ರ‍್ಯಾಲಿಯ ಕಾಲ್ತುಳಿತ ದುರಂತದಲ್ಲಿ (
ಮೃತಪಟ್ಟವರ ಕಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಲು ತಮಿಳುನಾಡು ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಬೆಂಬಲಿಸಿರುವ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.
ಆದಾಗ್ಯೂ, ಇಂತಹ ಭೀಕರ ದುರಂತ ಸಂಭವಿಸಿದಾಗ ಸಂತ್ರಸ್ತ ಕುಟುಂಬದ ಆಸರೆಯಾಗಿದ್ದ ಏಕೈಕ ವ್ಯಕ್ತಿ ಮೃತಪಟ್ಟಿದ್ದರೆ, ಅವರ ಮಕ್ಕಳಿಗೆ ಸರ್ಕಾರ ಕೆಲಸ ನೀಡಬಾರದೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿಗಳಾದ ಜಸ್ಟಿಸ್ ಜೆ.ಬಿ. ಪಾರ್ದಿವಾಲಾ ಹಾಗೂ ಜಸ್ಟಿಸ್ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಈ ಕೇಸ್ ವಿಚಾರಣೆ ನಡೆಸಿದ್ದು, ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇತರರಿಗೆ ನೋಟಿಸ್ ಜಾರಿ ಮಾಡಿದೆ.
ದುರಂತ ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಕುಟುಂಬಗಳುಗೆ ಸಹಾಯ ಹಸ್ತ ಚಾಚಲು ಮತ್ತು ಪರಿಹಾರ ಹಾಗೂ ಉದ್ಯೋಗ ನೀಡಲು ಸರ್ಕಾರ ತೀರ್ಮಾನಿಸಿದರೆ, ಅದನ್ನು ಪ್ರಶ್ನಿಸುವುದು ಹೇಗೆ ಸರಿಯಾಗುತ್ತದೆ? ಕುಟುಂಬಕ್ಕೆ ಆಸರೆಯಾಗಿದ್ದವರೇ ದುರಂತದಲ್ಲಿ ಮೃತಪಟ್ಟರೆ ಅಂತವರ ಮಗ ಅಥವಾ ಮಗಳಿಗೆ ಸರ್ಕಾರ ಉದ್ಯೋಗ ನೀಡುವುದರಲ್ಲಿ ತಪ್ಪೇನಿದೆ? ಎಂದು ಸುಪ್ರೀಂದ ಕೋರ್ಟ್ ಪ್ರಶ್ನಿಸಿದೆ.
ಘಟನೆಯ ಹಿನ್ನೆಲೆ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ನಡೆಸಿದ್ದ ರ‍್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮಕ್ಕಳು ಸೇರಿದಂತೆ ಒಟ್ಟು 41 ಜನರು ಜೀವ ಕಳೆದುಕೊಂಡಿದ್ದರು. ಆದಾಗ್ಯೂ, ನಟ ವಿಜಯ್ ರ‍್ಯಾಲಿಗೆ ತಡವಾಗಿ ಬಂದಿದ್ದರಿಂದ ಮೈದಾನದಲ್ಲಿ ಜನಸಂದಣಿ ಹೆಚ್ಚಾಗಿತ್ತು. ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಆರೋಪಿಸಿದ್ದರು.
ಆದರೆ, ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದ ಟಿವಿಕೆ (TVK), ಇದು ಪೋಲೀಸರ ವೈಫಲ್ಯ ಮತ್ತು ರಾಜಕೀಯ ಪಿತೂರಿಯ ಭಾಗ ಎಂದು ದೂರಿತ್ತು (ಏಜೆನ್ಸೀಸ್).