ಕೇಂದ್ರ ಗೃಹ ಸಚಿವ ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವುದು
ನವದೆಹಲಿ: ರಾಷ್ಟ್ರ ರಾಜಕೀಯ ಅಂಗಳದಲ್ಲಿ ಮತ್ತೊಮ್ಮೆ 'ಯೂನಿಫಾರ್ಮ್ ಸಿವಿಲ್ ಕೋಡ್' ಅಂದರೆ ಏಕರೂಪ ನಾಗರಿಕ ಸಂಹಿತೆ (UCC) ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಂಬೈನಲ್ಲಿ ಭಾನುವಾರ (ಸೆ.13) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), 2029ರೊಳಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾಣಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಮಾತನಾಡಿರುವ ಅವರು, ದೇಶದ ಆಂತರಿಕ ಭದ್ರತೆ, ಆರ್ಥಿಕ ಪ್ರಗತಿ ಹಾಗೂ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು
ಮುಂಬೈನಲ್ಲಿ ಮಾತನಾಡಿದ ಅಮಿತ್ ಶಾ, ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮೋದಿ ಸರ್ಕಾರ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದಿದ್ದಾರೆ. ಭಯೋತ್ಪಾದನೆ ವಿರುದ್ಧ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯೇ ಇದಕ್ಕೆ ಸಾಕ್ಷಿ. ಸರ್ಜಿಕಲ್ ಸ್ಟ್ರೈಕ್ಸ್, ವೈಮಾನಿಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತಹ ಕಾರ್ಯಾಚರಣೆಗಳು ಭಾರತದ ಗಡಿಯನ್ನು ಸುರಕ್ಷಿತವಾಗಿರಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ದೇಶದ ಪ್ರಭಾವವನ್ನು ಹೆಚ್ಚಿಸಿವೆ ಎಂದು ಬಣ್ಣಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಾ, 2014ಕ್ಕೂ ಮೊದಲು ನಮ್ಮ ರಾಷ್ಟ್ರೀಯ ರಾಜಕಾರಣವು ಭ್ರಷ್ಟಾಚಾರ, ಜಾತಿವಾದ ಮತ್ತು ವಂಶಾಡಳಿತದ ಪಿಡುಗಿಗೆ ಸಿಲುಕಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ನಮ್ಮದೇ ಆದ ದೇಶಿ ಭಾಷೆಗಳಿಗೆ ಸೂಕ್ತ ಮನ್ನಣೆ ಸಿಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಸುಮಾರು ಐದು ದಶಕಗಳಿಂದ ದೇಶಕ್ಕೆ ಕಂಟಕವಾಗಿದ್ದ ಆರ್ಟಿಕಲ್ 370 ರದ್ದತಿ, ನಕ್ಸಲಿಸಂ ಮಟ್ಟಹಾಕಿರುವುದು ಮತ್ತು ಈಶಾನ್ಯ ಭಾರತದಲ್ಲಿ ಶಾಂತಿ ನೆಲೆಸಿರುವುದು ಮೋದಿ ಸರ್ಕಾರದ ಐತಿಹಾಸಿಕ ಸಾಧನೆಗಳು ಎಂದು ಹೇಳಿದ್ದಾರೆ.
'ಫ್ರಜೈಲ್ ಫೈವ್'ನಿಂದ ನಂಬರ್ 5 ಆರ್ಥಿಕತೆಯವರೆಗೆ!
ದೇಶದ ಆರ್ಥಿಕತೆಯ ಬಗ್ಗೆ ಮಾತನಾಡಿದ ಗೃಹ ಸಚಿವರು, ಮೋದಿ ಸರ್ಕಾರ 'ಭಾರತ ಮೊದಲು' (India First) ಎಂಬ ತತ್ವದಡಿ ಕೆಲಸ ಮಾಡುತ್ತಿದೆ ಎಂದರು. ಯಾವಾಗಲೂ ದುರ್ಬಲ ಆರ್ಥಿಕತೆಗಳ ಸಾಲಿನಲ್ಲಿದ್ದ ಭಾರತ, ಇಂದು ವಿಶ್ವದ ಅಗ್ರ ಐದು ಆರ್ಥಿಕತೆಗಳ ಪಟ್ಟಿಗೆ ಲಗ್ಗೆ ಇಟ್ಟಿದೆ.
ಪ್ರಥಮ ತ್ರೈಮಾಸಿಕದ ಅಂಕಿಅಂಶಗಳ ಪ್ರಕಾರ ಶೇ. 7.8ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವ ಮೂಲಕ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಿಸುವ ಗುರಿಯೊಂದಿಗೆ ದೇಶದ ಯುವಜನರು ಹಾಗೂ 140 ಕೋಟಿ ಜನತೆ ಹೆಜ್ಜೆಹಾಕುತ್ತಿದ್ದಾರೆ ಎಂದರು.
ಸೆಪ್ಟೆಂಬರ್ 17 ರಿಂದ ದೇಶಾದ್ಯಂತ 'ಸೇವಾ ಸಂಕಲ್ಪ ಅಭಿಯಾನ'
ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆಯ ಸವಿ ನೆನಪಿಗಾಗಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ದೇಶಾದ್ಯಂತ 'ಸೇವಾ ಸಂಕಲ್ಪ ಅಭಿಯಾನ'ವನ್ನು ಆರಂಭಿಸಲಿವೆ. ಈ ಅಭಿಯಾನದ ಮೂಲಕ ಕಳೆದ 25 ವರ್ಷಗಳ ಸ್ಫೂರ್ತಿದಾಯಕ ಸಾಧನೆಗಳು, ಸರ್ಕಾರದ ಜನಪರ ಯೋಜನೆಗಳು ಹಾಗೂ ಭವಿಷ್ಯದ ಕನಸುಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಏಕರೂಪ ನಾಗರಿಕ ಸಂಹಿತೆ ಎಂದರೇನು?
ಭಾರತದಲ್ಲಿ ವಿವಿಧ ಧರ್ಮಗಳು, ಜಾತಿಗಳಿಗೆ ತಕ್ಕಂತೆ ಬೇರೆ ಬೇರೆ ವಿವಾಹ, ವಿಚ್ಛೇದನ ಹಾಗೂ ಆಸ್ತಿ ಹಂಚಿಕೆ ಕಾಯ್ದೆಗಳಿವೆ. ಇದರಿಂದ ನ್ಯಾಯಾಂಗ ವ್ಯವಸ್ಥೆಗೂ ಕೆಲವೊಮ್ಮೆ ಗೊಂದಲ ಉಂಟಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನಂತೆ, ದೇಶದ ಎಲ್ಲಾ ನಾಗರಿಕರಿಗೆ ಒಂದೇ ರೀತಿಯ ಕಾನೂನು ಅನ್ವಯಿಸಬೇಕು ಮತ್ತು ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕು ಎಂಬುದು ಯುಸಿಸಿಯ ಮುಖ್ಯ ಉದ್ದೇಶವಾಗಿದೆ.
ಬ್ರಿಟಿಷರ ಕಾಲದಿಂದಲೂ ಚಾಲನೆಯಲ್ಲಿರುವ ಭಿನ್ನ ವೈಯಕ್ತಿಕ ಕಾನೂನುಗಳನ್ನು ಸರಳೀಕರಿಸಿ, ದೇಶದಲ್ಲಿ ಸಮಾನತೆ ಮತ್ತು ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲು ಯುಸಿಸಿ ಅಸ್ತ್ರವನ್ನು ಬಳಸಲು ಕೇಂದ್ರ ಸರ್ಕಾರ ಮುಂದಾಗಿದೆ. ಒಟ್ಟಿನಲ್ಲಿ, ಮುಂಬೈನಲ್ಲಿ ಅಮಿತ್ ಶಾ ನೀಡಿರುವ ಈ ಹೇಳಿಕೆಗಳು ಸದ್ಯ ದೇಶದ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರ-ವಿರೋಧ ಚರ್ಚೆಗಳು ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು, (ಏಜೆನ್ಸೀಸ್).