ಮಧ್ಯಪ್ರದೇಶ: ಹಠಾತ್ ಬಿರುಗಾಳಿಯಿಂದಾಗಿ ಬಾರ್ಗಿ ಅಣೆಕಟ್ಟು ಜಲಾಶಯದಲ್ಲಿ 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ (Boat Accident ) ದೋಣಿ ಮಗುಚಿಬಿದ್ದಿದ್ದು, 9 ಜನರು ಸಾವನ್ನಪ್ಪಿರುವ ಘಟನೆ ಗುರುವಾರ (ಮಾ.30) ಮಧ್ಯಪ್ರದೇಶದ ಜಬಲ್ಪುರದಲ್ಲಿ ಸಂಭವಿಸಿದೆ.
ದುರಂತ ಸಂಭವಿಸಿದ್ದೇಗೆ?
ಗುರುವಾರ ಪ್ರವಾಸಿಗರು ನರ್ಮದಾ ನದಿಯ ಬಾರ್ಗಿ ಅಣೆಕಟ್ಟು ಜಲಾಶಯದಲ್ಲಿ ಕ್ರೂಸ್ ಸವಾರಿಯನ್ನು ಆನಂದಿಸುತ್ತಿದ್ದಾಗ ಹವಾಮಾನವು ಏಕಾಏಕಿ ಬದಲಾಯಿತು. ಜೋರಾಗಿ ಗಾಳಿ ಬೀಸಿದ್ದರಿಂದ ದೋಣಿಯು ನಿಯಂತ್ರಣ ತಪ್ಪಿ ನೀರಿನಲ್ಲಿ ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಪ್ರವಾಸಿಗರು ನೀರಿಗೆ ಜಾರಿದ್ದಾರೆ ಎನ್ನಲಾಗಿದೆ.
ಈ ಘಟನೆ ಬಗ್ಗೆ ಪ್ರವಾಸಿ ಸಂಗೀತಾ ಕೋರಿ ಮಾತನಾಡಿದ್ದು, ಪ್ರವಾಸಿಗರಿಗೆ ಮೊದಲಿಗೆ ಯಾವುದೇ ಸುರಕ್ಷತಾ ಲೈಫ್ ಜಾಕೆಟ್ ನೀಡಿರಲಿಲ್ಲ. ಈ ಬೋಟಿಂಗ್ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ದೋಣಿಯೊಳಗೆ ನೀರು ನುಗ್ಗಲು ಪ್ರಾರಂಭವಾಯಿತು. ಆಗ ಆತುರದಲ್ಲಿ ಜಾಕೆಟ್ಗಳನ್ನು ನೀಡಲು ಆರಂಭಿಸಿದರು. ಅಷ್ಟರಲ್ಲೇ ದೋಣಿ ಮಗುಚಿ ಬಿತ್ತು ಎಂದು ಹೇಳಿದ್ದಾರೆ.
ಆದಾಗ್ಯೂ, ದೋಣಿ ಪೈಲಟ್ ಸ್ವಲ್ಪವೂ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಸ್ಥಳೀಯ ಜನರು ಕೂಗುತ್ತಾ ಕ್ರೂಸ್ ಅನ್ನು ಸುರಕ್ಷಿತ ಕಡೆಗೆ ಕರೆದೊಯ್ಯುವಂತೆ ಸೂಚಿಸುತ್ತಿದ್ದರು. ಆದರೆ, ಅವನು ಅದೇ ದಾರಿಯಲ್ಲಿ ಹೋಗುತ್ತಲೇ ಇದ್ದನು ಇದರಿಂದ ದೋಣಿ ಅಪಘಾತಕ್ಕೀಡಾಯಿತು ಎಂದರು.
ಹವಾಮಾನ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿದೆ.
ಜಬಲ್ಪುರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಬುಧವಾರ ಎಚ್ಚರಿಕೆ ನೀಡಿದ್ದರೂ ಸಹ ಗುರುವಾರ ಸಂಜೆ 4:30 ರ ಸುಮಾರಿಗೆ ಕ್ರೂಸ್ ಅನ್ನು ನೀರಿಗೆ ಇಳಿಸಲು ಅನುಮತಿ ನೀಡಿದ್ದು ಆಡಳಿತ ಮಂಡಳಿಯ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ.
ತೀರದಲ್ಲಿ ರಕ್ಷಣಾ ಕಾರ್ಯಾಚರಣೆ, ದುಃಖಿತ ಕುಟುಂಬಗಳು
ಇಲ್ಲಿಯವರೆಗೆ, ಅಪಘಾತದಲ್ಲಿ ಸುಮಾರು 22 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, 9 ಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ. ಕ್ರೂಸ್ ಸುಮಾರು 20 ಮೀಟರ್ ನೀರಿನ ಅಡಿಯಲ್ಲಿ ಮುಳುಗಿದ್ದು, ಅಣೆಕಟ್ಟಿನ ದಡದಿಂದ ಸುಮಾರು 300 ಮೀಟರ್ ಒಳಗೆ ಅಪಘಾತ ಸಂಭವಿಸಿದೆ ಎಂದು ವರದಿ ಮಾಡಲಾಗಿದೆ (ಏಜೆನ್ಸೀಸ್).