Ritabrata Banerjee | ಸ್ಪೀಕರ್ ಆದೇಶಕ್ಕಿಲ್ಲ ತಡೆ, ವಿಪಕ್ಷ ನಾಯಕನಾಗಿ ರೀತಬ್ರತಾ ಮುಂದುವರಿಕೆ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಬಂಡಾಯ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೋಲ್ಕತ್ತಾ ಹೈಕೋರ್ಟ್‌ನಿಂದ ಭಾರಿ ಆಘಾತ ಎದುರಾಗಿದೆ. ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಬಂಡಾಯ ನಾಯಕ ರೀತಬ್ರತಾ ಬ್ಯಾನರ್ಜಿ (Ritabrata Banerjee) ಅವರನ್ನು ನೇಮಕ ಮಾಡಿದ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸ್ಪೀಕರ್ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ರಾವ್ ಅವರ ಪೀಠವು, ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡದಿದ್ದರೂ, ಈ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸಂಬಂಧಪಟ್ಟ ಪ್ರತಿವಾದಿಗಳಿಗೆ ಸೂಚಿಸಿದೆ. ಮೂರು ವಾರಗಳ ಒಳಗಾಗಿ ಪ್ರತಿವಾದಿಗಳು ತಮ್ಮ ಆಕ್ಷೇಪಣಾ ಅಫಿಡವಿಟ್ ಸಲ್ಲಿಸಬೇಕಾಗಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಮುಂದಿನ ಎರಡು ವಾರಗಳ ಸಮಯ ನೀಡಲಾಗಿದೆ. ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ನಿಗದಿಪಡಿಸಿದ್ದು, ಅಲ್ಲಿಯವರೆಗೆ ಸ್ಪೀಕರ್ ಕೈಗೊಂಡಿರುವ ನಿರ್ಧಾರವೇ ಜಾರಿಯಲ್ಲಿರಲಿದೆ.
64 ಶಾಸಕರ ಬೆಂಬಲವಿದೆ ಎಂದ ರೀತಬ್ರತಾ!
ಇತ್ತ ಕೋಲ್ಕತ್ತಾ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಬಂಡಾಯ ಬಣದ ನಾಯಕ ರೀತಬ್ರತಾ ಬ್ಯಾನರ್ಜಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ವಿಧಾನಸಭೆಯಲ್ಲಿ ತಮ್ಮ ನೇತೃತ್ವದ ಬಣಕ್ಕೆ ಈಗ ಒಟ್ಟು 64 ಶಾಸಕರ ಬೆಂಬಲವಿದೆ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದಾರೆ. ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಈಗಾಗಲೇ ಬೆಂಬಲ ನೀಡಿರುವ ಶಾಸಕರ ಪಟ್ಟಿಯನ್ನು ವಿಧಾನಸಭೆಯ ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಲಪರೀಕ್ಷೆ ನಡೆಸುವಂತೆ ಸವಾಲ್!
ಟಿಎಂಸಿಯಿಂದ ಹೊರಬಂದು ಅಸಲಿ ಟಿಎಂಸಿ ಎಂಬ ಹೊಸ ಬಣ ಕಟ್ಟಿಕೊಂಡಿರುವ ರೀತಬ್ರತಾ ಬ್ಯಾನರ್ಜಿ, ಪಕ್ಷದ ಮೇಲಿನ ನಿಜವಾದ ಹಿಡಿತ ಯಾರ ಕೈಯಲ್ಲಿದೆ ಎಂಬುದನ್ನು ಸಾಬೀತುಪಡಿಸಲು ವಿಧಾನಸಭೆಯಲ್ಲಿ ತಕ್ಷಣವೇ ಬಲಪರೀಕ್ಷೆ ನಡೆಸಬೇಕು ಎಂದು ಸವಾಲು ಹಾಕಿದ್ದಾರೆ. ಈ ಹಿಂದೆ 58 ಶಾಸಕರ ಸಹಿ ಇರುವ ಪಟ್ಟಿಯನ್ನು ಸ್ಪೀಕರ್‌ಗೆ ನೀಡಿ, ತಮಗೆ ಮೂರನೇ ಎರಡರಷ್ಟು ಶಾಸಕರ ಬೆಂಬಲ ಇರುವುದಾಗಿ ಅವರು ದಾವೆ ಹೂಡಿದ್ದರು. ಅದನ್ನು ಪರಿಶೀಲಿಸಿದ್ದ ಸ್ಪೀಕರ್, ರೀತಬ್ರತಾ ಅವರನ್ನು ಅಧಿಕೃತವಾಗಿ ವಿರೋಧ ಪಕ್ಷದ ನಾಯಕ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದ್ದರು. ಈಗ ಈ ಸಂಖ್ಯಾಬಲ 64ಕ್ಕೆ ಏರಿಕೆಯಾಗಿದ್ದು, ಮುಂದಿನ ವಾರದ ಆರಂಭದ ವೇಳೆಗೆ ಮತ್ತಷ್ಟು ಶಾಸಕರು ತಮ್ಮ ಪಾಳಯಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಬಂಡಾಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).