- ಭಾರತೀಯ ಉದ್ಯೋಗಿಗಳ ಹುದ್ದೆಗೂ, ಸಂಬಳಕ್ಕೂ ಹೊಂದಾಣಿಕೆ ಇಲ್ಲ
- ಹುದ್ದೆಯ ಹೆಸರು ಬದಲಾದರೆ ಸಾಲದು, ಹೆಚ್ಚು ಸಂಬಳವೂ ಬೇಕು
- ಪ್ರಮೋಷನ್ ಪಡೆದವರಲ್ಲೂ ಇದೇ ಪರಿಸ್ಥಿತಿ, ಉದ್ಯೋಗಿಗಳ ಕಳವಳ
ನವದೆಹಲಿ: ಆಫೀಸ್ಲ್ಲಿ ದೊಡ್ಡ ಹುದ್ದೆ ಎಂಬ ಖುಷಿ ಒಂದೆಡೆಯಾದರೆ, ಅದಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ ಅನ್ನುವ ಬೇಸರ ಮತ್ತೊಂದೆಡೆ. ಭಾರತದಲ್ಲಿ ಉದ್ಯೋಗಿಗಳ ನಡುವೆ ಇಂತಹ ಅಸಮಾಧಾನ ಹೆಚ್ಚುತ್ತಿರುವ ಬೆನ್ನಲ್ಲೇ ಹೊಸ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.
ಸಮೀಕ್ಷೆಯ ಪ್ರಕಾರ, ಸುಮಾರು ಶೇ.60ರಷ್ಟು ಭಾರತೀಯ ವೃತ್ತಿಪರರು ತಮ್ಮ ಹುದ್ದೆ (Job Title) ಮತ್ತು ಪಡೆಯುತ್ತಿರುವ ಸಂಬಳಕ್ಕೂ ಹೊಂದಾಣಿಕೆ ಇಲ್ಲ ಎನ್ನುತ್ತಿದ್ದಾರೆ. ದೇಶಾದ್ಯಂತ 1,211 ಉದ್ಯೋಗದಾತರು ಹಾಗೂ 2,533 ಉದ್ಯೋಗಿಗಳ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಹುದ್ದೆ ದೊಡ್ಡದು, ಸಂಬಳ ಚಿಕ್ಕದು
ಇನ್ನು, ಕಂಪನಿಗಳಲ್ಲಿ ನೌಕರರಿಗೆ ಹೆಚ್ಚು ಹಿರಿಯ ಸ್ಥಾನಮಾನ ಇರುವಂತಹ ಜಾಬ್ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರ ಬಹುಪಾಲು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ಶೇ.80ರಷ್ಟು ವೃತ್ತಿಪರರು ಇಂತಹ ದೊಡ್ಡ ಹುದ್ದೆಯ ಹೆಸರನ್ನು ನೀಡುವ (Title Inflation) ಪ್ರವೃತ್ತಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಆದರೆ, ಜವಾಬ್ದಾರಿ ಹೆಚ್ಚಾದಷ್ಟೇ ಜಾಸ್ತಿಯಾಗುತ್ತಿಲ್ಲ ಎಂಬುದು ಉದ್ಯೋಗಿಗಳ ಕಳವಳ. ಪ್ರಮೋಷನ್ ಪಡೆದವರಲ್ಲೂ ಇದೇ ಪರಿಸ್ಥಿತಿ ಕಾಣಬಹುದು. ಕಳೆದ ಎರಡು ವರ್ಷಗಳಲ್ಲಿ ಹುದ್ದೆ ಬದಲಾದ ಉದ್ಯೋಗಿಗಳ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಮಂದಿಗೆ ಯಾವುದೇ ಸಂಬಳ ಹೆಚ್ಚಾಗಿಲ್ಲ. ಒಂದು ವೇಳೆ ಹೆಚ್ಚಾದರೂ ಶೇ.5ರ ಗಡಿ ದಾಟಿಲ್ಲ.
‘ಡಿಸಿಗ್ನೇಷನ್’ಗಿಂತ ಸಂಬಳವೇ ಮುಖ್ಯ
ಹೊಸ ಉದ್ಯೋಗದ ಅವಕಾಶಗಳನ್ನು ಆಯ್ಕೆ ಮಾಡುವಾಗಲೂ ಹೆಚ್ಚಿನ ಸಂಭಳಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಮೀಕ್ಷೆಯಲ್ಲಿ ಶೇ.52ರಷ್ಟು ವೃತ್ತಿಪರರು ಒಳ್ಳೆ ಸ್ಥಾನಕ್ಕಿಂತ, ಹೆಚ್ಚಿನ ಸಂಬಳವನ್ನೇ ಆಯ್ಕೆ ಮಾಡುವುದು ಎಂದಿದ್ದಾರೆ. ಇದರಿಂದ ನೌಕರರ ದೃಷ್ಟಿಯಲ್ಲಿ ಕೇವಲ ಹುದ್ದೆಯ ಹೆಸರು ಬದಲಾದರೆ ಸಾಲದು ಎಂಬುದು ಗೊತ್ತಾಗುತ್ತೆ. ಜವಾಬ್ದಾರಿ ಮತ್ತು ಹಿರಿಯ ಹುದ್ದೆಗೆ ತಕ್ಕಂತೆ ವೇತನ ಸಿಗಬೇಕು ಎನ್ನುವುದು ಉದ್ಯೋಗಿಗಳ ಹಂಬಲ,(ಏಜೆನ್ಸೀಸ್).