M K Stalin |ರಾಜ್ಯಪಾಲ ಆರ್​ ಎನ್​ ರವಿ ಅವರೊಂದಿಗೆ ಸಿಎಂ ಎಂ.ಕೆ ಸ್ಟಾಲಿನ್ 
ದೇಶ

M K Stalin | ಕರುಣಾನಿಧಿ ಹೆಸರಲ್ಲಿ ವಿಶ್ವವಿದ್ಯಾಲಯ; ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ರಾಜ್ಯಪಾಲರ ನಿರ್ಧಾರಕ್ಕೆ ಸ್ಟಾಲಿನ್​ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಎಂ.ಕೆ ಸ್ಟಾಲಿನ್​ ಮತ್ತು ರಾಜ್ಯಪಾಲ ಆರ್​ ಎನ್​ ರವಿ ನಡುವಿನ ಸಂಘರ್ಷ ಮತ್ತೆ ಆರಂಭ
  • ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಹೆಸರಿನಲ್ಲಿ ವಿಶ್ವವಿದ್ಯಾಲಯ
  • ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ರಾಜ್ಯಪಾಲರ ನಿರ್ಧಾರಕ್ಕೆ ಸ್ಟಾಲಿನ್​ ವಿರೋಧ
ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ಮತ್ತು ರಾಜ್ಯಪಾಲ ಆರ್​ ಎನ್​ ರವಿ ನಡುವಿನ ಸಂಘರ್ಷ ಮತ್ತೆ ಆರಂಭ, ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಮಸೂದೆಯನ್ನು, ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸುವ ನಿರ್ಧಾರಕ್ಕೆ ಬಂದ ಬಳಿಕ ಇದು ಮತ್ತೆ ಮುನ್ನೆಲೆಗೆ ಬಂದಿದೆ.
ಈರೋಡ್‌ನಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್​, ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ರಾಜ್ಯಪಾಲರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಬೇಕಾದಷ್ಟು ಜಟಿಲವಾದ ಅಂಶ ಅದರಲ್ಲೇನಿದೆ? ರಾಜ್ಯಪಾಲರು, ರಾಷ್ಟ್ರಪತಿಗಳ ಮೇಲೆ ಆರೋಪ ಹೊರಿಸಿ ಇದರಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರಪತಿಗಳು ಜನರ ಆದೇಶವನ್ನು ಗೌರವಿಸುತ್ತಾರೆ ಮತ್ತು ಈ ಮಸೂದೆಗೆ ಬೆಂಬಲ ನೀಡುವ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏನಿದು ಸಂಘರ್ಷ..

ಕಲೈನಾರ್ ವಿಶ್ವವಿದ್ಯಾಲಯ ಮಸೂದೆಯನ್ನು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದು. ರಾಜ್ಯದ ಕುಂಭಕೋಣಂನಲ್ಲಿ ಕಲೈನಾರ್ (ಕರುಣಾನಿಧಿ ಅವರನ್ನು ಪ್ರೀತಿಯಿಂದ ಕರೆಯಲಾಗುತ್ತಿತ್ತು) ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಈ ಮಸೂದೆಯ ಉದ್ದೇಶ. ಸದರಿ ವಿಶ್ವವಿದ್ಯಾಲಯ ಅರಿಯಲೂರ್, ನಾಗಪಟ್ಟಣಂ, ತಂಜಾವೂರು ಮತ್ತು ತಿರುವರೂರು ಜಿಲ್ಲೆಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅಗತ್ಯಗಳನ್ನು ಪೂರೈಸಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಮಸೂದೆಯನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸುವ ರಾಜ್ಯಪಾಲರ ಕ್ರಮವನ್ನು ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಸ್ಟಾಲಿನ್ vs ರಾಜ್ಯಪಾಲರ ಹಣಾಹಣಿ..

ಭಾಷೆ ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ರಾಜ್ಯಪಾಲರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಸ್ಟಾಲಿನ್, ತಮಿಳಿನ ಮಹತ್ವವನ್ನು ತಮಗೆ ಮತ್ತು ಡಿಎಂಕೆ ಸರ್ಕಾರಕ್ಕೆ ಕಲಿಸುವ ಅಗತ್ಯವಿಲ್ಲ, ಅದರಲ್ಲಿ ನಮಗೆ ಪಿಎಚ್‌ಡಿ ಆಗಿದೆ ಎಂದು ಹೇಳಿದರು. ರಾಜ್ಯಪಾಲರು ಇದೇ ರೀತಿಯ ವಿಳಂಬ ನೀತಿಯನ್ನು ಮುಂದುವರಿಸಿದ್ದೇ ಆದಲ್ಲಿ, ತಮಿಳುನಾಡು ಶಾಸಕರು ನೇರವಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮಸೂದೆಗಳಿಗೆ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜನರ ನಿರ್ಧಾರವನ್ನು ಗೌರವಿಸದಿದ್ದರೆ ನಮ್ಮ ಶಾಸಕರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ವಿನಂತಿ ಸಲ್ಲಿಸುತ್ತಾರೆ. ಈ ಬಗ್ಗೆ ಸಂಸತ್ತಿನಲ್ಲಿಯೂ ಧ್ವನಿ ಎತ್ತುತ್ತೇವೆ, ರಾಜ್ಯ ವಿಧಾನಸಭೆಯ ನಿರ್ಧಾರಗಳು ಜನರ ಇಚ್ಛೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪುನರುಚ್ಚರಿಸಿದರು.
ದೀರ್ಘಕಾಲದ ವಿವರಿಸಲಾಗದ ವಿಳಂಬವು ನ್ಯಾಯಾಂಗ ಪರಿಶೀಲನೆಗೆ ಕಾರಣವಾಗಬಹುದು ಎಂಬ ವಾಸ್ತವದ ಹೊರತಾಗಿಯೂ, ರಾಷ್ಟ್ರಪತಿಗಳ ಉಲ್ಲೇಖದ ಕುರಿತು ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ನೀಡಿದ ಕೆಲವು ದಿನಗಳ ನಂತರ ಸ್ಟಾಲಿನ್​​ರ ಈ ಹೇಳಿಕೆಗಳು ಹೊರ ಬಿದ್ದಿವೆ. ಮಸೂದೆಗಳ ಮೇಲೆ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಕ್ರಮ ಕೈಗೊಳ್ಳಲು ಯಾವುದೇ ಸಮಯವನ್ನು ನಿಗದಿಪಡಿಸಲಾಗುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ಈ ವಿಷಯದ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ಅಭಿಪ್ರಾಯವನ್ನು ಅನುಸರಿಸಿ, ರಾಜ್ಯಪಾಲರು ಮಸೂದೆಗಳನ್ನು ಅಂಗೀಕರಿಸಲು ಸಮಯ ಮಿತಿಯನ್ನು ನಿಗದಿಪಡಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವವರೆಗೆ ಡಿಎಂಕೆ ಸರ್ಕಾರ ವಿಶ್ರಾಂತಿ ಪಡೆಯುವುದಿಲ್ಲ ಎಂದು ಸ್ಟಾಲಿನ್ ಶಪಥ ಮಾಡಿದ್ದಾರೆ(ಏಜೆನ್ಸೀಸ್​).