Bhupen Borah 
ದೇಶ

ಭೂಪೇನ್ ರಾಜೀನಾಮೆ..ಗೊಗೊಯ್‌ಗೆ ಸಂಕಷ್ಟ...ಸಿಎಂ ಶರ್ಮಾರಿಂದ ಬೋರಾಗೆ ಸಿಕ್ತು "ಸುರಕ್ಷಿತ" ಆಹ್ವಾನ | Bhupen Borah

ದಿಸ್ಪೂರ್​​: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂಗೆ ಭೇಟಿ ನೀಡಲು ನಿರ್ಧರಿಸಿರುವ ಕೆಲವೇ ದಿನಗಳ ಮೊದಲು, ಪಕ್ಷದ ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ರಾಜೀನಾಮೆಯಿಂದ ಪಕ್ಷವು ಬೆಚ್ಚಿಬಿದ್ದಿತ್ತು.
ರಾಜೀನಾಮೆ ಮತ್ತು ಸ್ಪಷ್ಟೀಕರಣ
ಸೋಮವಾರ, ಕ್ಷಿಪ್ರ ಬೆಳವಣಿಗೆ ಎಂಬಂತೆ ಬೋರಾ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಇದಾದ ಸ್ವಲ್ಪ ಸಮಯದ ಬಳಿಕ, ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ವರದಿಗಳನ್ನು ತಳ್ಳಿಹಾಕಿದ ಬೊರಾ, ತಮ್ಮ ನಿರ್ಧಾರವನ್ನು ಹಿಂದೆ ಸರಿದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾ, ಚರ್ಚೆಗಳು ನಡೆಯುತ್ತಿದ್ದು, ಹಿರಿಯ ನಾಯಕರಾದ ಪ್ರದ್ಯುತ್ ಬೋರ್ಡೊಲೊಯ್ ಮತ್ತು ದೇಬಬ್ರತ ಸೈಕಿಯಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಪರಿಶೀಲಿಸುವಂತೆ ತಿಳಿಸಿದ್ದೇನೆ, ನಾನು ಇಡೀ ದಿನ ಕಾಯಲು ಸಿದ್ಧನಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಕಾಂಗ್ರೆಸ್ ಕಾರ್ಯವೈಖರಿಯ ಬಗ್ಗೆ ಬೋರಾ ಹೇಳಿದ್ದೇನು..?

ಬೋರಾ ಅವರದ್ದು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ​ ಪತ್ರದಲ್ಲಿ, ಪಕ್ಷದ ಆಂತರಿಕ ಚಲನಶೀಲತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯೊಳಗಿನ ನಾಯಕತ್ವ ವಿಧಾನವನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಆಸ್ಸಾಂ ಘಟಕದ ಅಧ್ಯಕ್ಷರಾಗಿರುವ ಗೌರವ್ ಗೊಗೊಯ್ ಪಾಕಿಸ್ತಾನ ಭೇಟಿಯ ಕುರಿತು ಬಿಜೆಪಿ ಎತ್ತಿರುವ ಆರೋಪಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದು, ಆ ಆರೋಪಗಳಿಗೆ ಪ್ರತಿಕ್ರಿಯೆಯ ಕೊರತೆಯಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಬೋರಾ ಹೇಳಿದ್ದಾರೆ.
ರಾಜ್ಯ ಘಟಕದೊಳಗೆ ತಮ್ಮನ್ನು ಕಡೆಗಣಿಸಲಾಗಿದೆ ಎಂದಿರುವ ಬೋರಾ, ಸಂಘಟನೆಯ ಕಾರ್ಯಚಟುವಟಿಕೆಯು ಅವರ ಘನತೆ ಮತ್ತು ಸ್ವಾಭಿಮಾನದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. 2021 ರಿಂದ 2025 ರವರೆಗೆ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾಗಿ ಬೋರಾ ಸೇವೆ ಸಲ್ಲಿಸಿದ್ದು, ಅವರ ಸ್ಥಾನವನ್ನು ಸಂಸದ ಗೊಗೊಯ್ ನಿಭಾಯಿಸುತ್ತಿದ್ದಾರೆ.

ಬಿಜೆಪಿಯ ಬಾಗಿಲು ತೆರೆದಿದೆ ಎಂದ ಸಿಎಂ ಶರ್ಮಾ

ತಾವು ಇನ್ನೂ ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿರುವ ಬೋರಾ, ಆರು ವಿಭಿನ್ನ ಪಕ್ಷಗಳಿಂದ ಪ್ರಸ್ತಾವನೆಗಳು ಬಂದಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬೋರಾರನ್ನು ಬಿಜೆಪಿ ಸೇರಲು ಬಹಿರಂಗವಾಗಿ ಆಹ್ವಾನಿಸಿದರು.
ಬೋರಾ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡಿರುವುದು ಅನುಮಾನ ಎಂದಿರುವ ಶರ್ಮಾ, ಇಬ್ಬರು ನಾಯಕರು ದೂರವಾಣಿ ಮೂಲಕ ಮಾತನಾಡರುವುದನ್ನು ದೃಢಪಡಿಸಿದರು. ಬೋರಾಗೆ ಬಿಜೆಪಿಯ ಬಾಗಿಲುಗಳು ತೆರೆದಿದ್ದು, ಪಕ್ಷ ಬದಲಾಯಿಸಲು ನಿರ್ಧರಿಸಿದರೆ ಅವರಿಗೆ ಸೂಕ್ತ ಗೌರವದೊಂದಿಗೆ ನೋಡಿಕೊಂಡು, ಅವರು ಬಯಸುವ ಕ್ಷೇತ್ರದಿಂದ ಟಿಕೆಟ್​ ನೀಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು(ಏಜೆನ್ಸೀಸ್​).