ಬೋಜಶಾಲಾ ಸಂಕೀರ್ಣ ಮತ್ತು ಸುಪ್ರೀಂಕೋರ್ಟ್
ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ ಸಂಕೀರ್ಣವನ್ನು ಸರಸ್ವತಿ ದೇವಿಗೆ ಅರ್ಪಿತವಾದ ದೇವಾಲಯವೆಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್(Supreme Court) ಸೋಮವಾರ(ಜು. 13) ಒಪ್ಪಿಗೆ ನೀಡಿದೆ.
ಮುಸ್ಲಿಂ ಅರ್ಜಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ಹುಜೆಫಾ ಅಹ್ಮದಿ ಮತ್ತು ವಕೀಲ ನಿಜಾಮ್ ಪಾಷಾ ಅವರು, ಸಿಜೆಐ ಸೂರ್ಯ ಕಾಂತ್, ನ್ಯಾ. ಜೋಯ್ಮಲ್ಯ ಬಾಗ್ಚಿ ಹಾಗೂ ವಿ ಮೋಹ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತುರ್ತು ಆಧಾರದ ಮೇಲೆ ಅರ್ಜಿ ವಿಚಾರಣೆ ನಡೆಸುವಂತೆ ವಾದಿಸಿದರು.
ಈ ವೇಳೆ ಸಿಜೆಐ ಸೂರ್ಯಕಾಂತ್, ಅರ್ಜಿಗಳಲ್ಲಿರುವ ದೋಷಗಳನ್ನು ತೆಗೆದುಹಾಕುವಂತೆ ಮೇಲ್ಮನವಿದಾರರ ವಕೀಲರಿಗೆ ಹೇಳಿದ್ದು, ಶೀಘ್ರದಲ್ಲೇ ಅವುಗಳನ್ನು ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮೇ 15 ರಂದು ಮಧ್ಯಪ್ರದೇಶ ಹೈಕೋರ್ಟ್, ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಿ ದೇವಾಲಯವಾಗಿದೆ ಎಂದು ತೀರ್ಪು ನೀಡಿತು. ಅದೇ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ್ದ ದಶಕಗಳಷ್ಟು ಹಳೆಯದಾದ ಎಎಸ್‌ಐ ಆದೇಶವನ್ನು ರದ್ದುಗೊಳಿಸಿತು.
ಭೋಜಶಾಲಾ ಸಂಕೀರ್ಣದ ಆಡಳಿತ ಮತ್ತು ನಿರ್ವಹಣೆಯ ಬಗ್ಗೆ ಕೇಂದ್ರ ಮತ್ತು ಭಾರತೀಯ ಪುರಾತತ್ವ ಸಮೀಕ್ಷೆ (ASI) ನಿರ್ಧರಿಸಬಹುದು ಎಂದು ಹೈಕೋರ್ಟ್ ಹೇಳಿತ್ತು. ಹಿಂದೂ ಸಮುದಾಯವು ಭೋಜಶಾಲೆಯನ್ನು ಸರಸ್ವತಿ ದೇವಿಗೆ ಅರ್ಪಿತವಾದ ದೇವಾಲಯವೆಂದು ಪರಿಗಣಿಸಿದರೆ, ಮುಸ್ಲಿಂ ಕಡೆಯವರು 11 ನೇ ಶತಮಾನದ ಸ್ಮಾರಕವನ್ನು ಕಮಲ್ ಮೌಲಾ ಮಸೀದಿ ಎಂದು ನಂಬಿದ್ದಾರೆ.
ಇನ್ನೂ ಭೋಜಶಾಲಾ ಸಂಕೀರ್ಣ ವಿವಾದ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ವಿರುದ್ಧದ ಯಾವುದೇ ಮೇಲ್ಮನವಿಯ ವಿಚಾರಣೆ ನಡೆಸದೆ ಯಾವುದೇ ಆದೇಶಗಳನ್ನು ಹೊರಡಿಸಬಾರದು ಎಂದು ಹಿಂದೂ ಪರವಾದ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್‌ಗಳನ್ನು ಸಲ್ಲಿಸಿದ್ದಾರೆ (ಏಜೆನ್ಸೀಸ್).