Narayan Chaudhary 
ದೇಶ

ಬಿಜೆಪಿಗೆ ಬಿಗ್ ಶಾಕ್.. 'ಕೈ' ಹಿಡಿದು ಮೇಯರ್ ಪಟ್ಟ ಏರಿದ ಕೇಸರಿ ರೆಬೆಲ್ ಲೀಡರ್ ಚೌಧರಿ! | Narayan Chaudhary

ಮುಂಬೈ: ಮಹಾರಾಷ್ಟ್ರದ ಭಿವಂಡಿ ನಿಜಾಂಪುರ ನಗರ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿ ನಾರಾಯಣ ಚೌಧರಿ (Narayan Chaudhary) ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲದೊಂದಿಗೆ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಳೆದ ತಿಂಗಳು ನಡೆದ ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 22, ಶಿವಸೇನೆ 12, ಎನ್‌ಸಿಪಿ ಎಸ್‌ಪಿ 12, ಸಮಾಜವಾದಿ ಪಕ್ಷ 6, ಕೊನಾರ್ಕ್ ವಿಕಾಸ್ ಅಘಾಡಿ 4, ಭಿವಾಂಡಿ ವಿಕಾಸ್ ಅಘಾಡಿ 3 ಮತ್ತು 1 ಸ್ವತಂತ್ರ ಅಭ್ಯರ್ಥಿ ಆಯ್ಕೆಯಾದರು.
ಇಂದು ಮೇಯರ್ ಚುನಾವಣೆ ನಡೆದ 90 ಸದಸ್ಯ ಬಲದ ಭಿವಾಂಡಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಹುಮತಕ್ಕೆ ಒಟ್ಟು 46 ಮತಗಳು ಬೇಕಾಗಿದ್ದವು. ಜಾತ್ಯತೀತ ರಂಗದ ಅಭ್ಯರ್ಥಿ ನಾರಾಯಣ್ ಚೌಧರಿ 48 ಪಡೆದು ಗೆಲುವು ಸಾಧಿಸಿದರು.

ಭಿವಂಡಿ ಸ್ಪರ್ಧೆ ಬದಲಾಗಿದ್ದು ಹೇಗೆ..?

ಪ್ರಾರಂಭದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ-ಎಸ್‌ಪಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ತಮ್ಮ ಮೇಯರ್ ಆಯ್ಕೆ ಮಾಡುವ ವಿಶ್ವಾಸದಲ್ಲಿದ್ದವು. ಆದರೆ, ಎಸ್​​ಪಿ ಇದರಿಂದ ಹಿಂದೆ ಸರಿದು ಶಿವಸೇನೆಗೆ ಬೆಂಬಲ ನೀಡುವುದಾಗಿ ಘೋಷಿಸಿತು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಮತ್ತು ಎನ್‌ಸಿಪಿ, ಮೇಯರ್ ಸ್ಥಾನಕ್ಕೆ ಅಗತ್ಯವಾದ ಸಂಖ್ಯೆಗಳನ್ನು ಒಟ್ಟುಗೂಡಿಸಲು ಜಾತ್ಯತೀತ ರಂಗವನ್ನು ರಚಿಸಿದವು. ನಾರಾಯಣ್ ಚೌಧರಿ ನೇತೃತ್ವದಲ್ಲಿ 9 ಬಿಜೆಪಿ ಕೌನ್ಸಿಲರ್‌ಗಳು ಪಕ್ಷ ತೊರೆದು ಕಾಂಗ್ರೆಸ್-ಎನ್‌ಸಿಪಿ-ಎಸ್‌ಪಿ ಮೈತ್ರಿಕೂಟವನ್ನು ಬೆಂಬಲಿಸಲು ನಿರ್ಧರಿಸಿದಾಗ ಪರಿಸ್ಥಿತಿ ನಾಟಕೀಯವಾಗಿ ರೂಪ ಪಡೆದುಕೊಂಡಿತು.

ಬಿಜೆಪಿ ಬಂಡಾಯಗಾರ ಮೇಯರ್ ಅಭ್ಯರ್ಥಿಯಾಗಿ ಆಯ್ಕೆ

ಈ ಎಲ್ಲರ ಬೆಂಬಲದೊಂದಿಗೆ ಜಾತ್ಯತೀತ ರಂಗದ ಬಲವು 51 ಕ್ಕೆ ಏರಿತು, ಬಹುಮತ 46 ಕ್ಕಿಂತ 5 ಸದಸ್ಯರು ಹೆಚ್ಚಾಗಿದ್ದರು. ಮೈತ್ರಿಕೂಟವು ಬಿಜೆಪಿಯ ಬಂಡಾಯ ನಾಯಕ ನಾರಾಯಣ್ ಚೌಧರಿಯನ್ನು ಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಬಂಡಾಯಕ್ಕೆ ಕಾರಣ

ಬಿಜೆಪಿ ಮೊದಲು ನಾರಾಯಣ ಚೌಧರಿಯನ್ನು ಮೇಯರ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸ್ನೇಹಾ ಪಾಟೀಲ್​ರಿಗೆ ಪಕ್ಷ ಅವಕಾಶ ನೀಡಿದ ಕಾರಣ ಅಸಮಾಧಾನಗೊಂಡ ಚೌಧರಿ, 9 ಮಂದಿ ಬಿಜೆಪಿ ಸದಸ್ಯರೊಂದಿಗೆ ಬಂಡಾಯವೆದ್ದು ಭಿವಂಡಿ ಸೆಕ್ಯುಲರ್ ಫ್ರಂಟ್ ರಚಿಸಿ ಮೇಯರ್​ ಆದರು.

ಕ್ರಮದ ಎಚ್ಚರಿಕೆ ನೀಡಿದ ಬಿಜೆಪಿ

ಈ ಫಲಿತಾಂಶವು ಬಿಜೆಪಿಗೆ ದೊಡ್ಡ ಮುಖಭಂಗ ತಂದಿದ್ದು, ಹಠಾತ್​ ಬೆಳವಣಿಗೆಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚೌಹಾಣ್, ಬಂಡಾಯಗಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ವಿಪ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಮತ್ತು ಈ ಚುನಾವಣೆಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಲಾಗುವುದು ಎಂದು ತಿಳಿಸಿದ್ದಾರೆ(ಏಜೆನ್ಸೀಸ್​).