ತೆಲಂಗಾಣದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್  
ದೇಶ

ಸಂಘರ್ಷ ಪೀಡಿತ ಜಗತ್ತಿಗೆ ಭಾರತೀಯ ಸನಾತನ ತತ್ವವೇ ಮದ್ದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ | Mohan Bhagwat

ಹೈದರಾಬಾದ್: ಜಗತ್ತು ಇಂದು ಅನೇಕ ಸಂಘರ್ಷ ಮತ್ತು ಅಶಾಂತಿಯಿಂದ ಕೂಡಿದ್ದು, ಮಾನವಕುಲದ ಉದ್ಧಾರಕ್ಕಾಗಿ ಭಾರತವು ಮತ್ತೊಮ್ಮೆ ವಿಶ್ವಗುರು ಸ್ಥಾನವನ್ನು ಅಲಂಕರಿಸಬೇಕಾದ ಅನಿವಾರ್ಯತೆ ಇದೆ ಎಂದು ಭಾನುವಾರ (ಡಿ.28) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ಈ ಬಗ್ಗೆ ಕನ್ಹಾ ಶಾಂತಿ ವನದಲ್ಲಿ ನಡೆದ ವಿಶ್ವ ಸಂಘ ಶಿಬಿರ-2025ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಭಾರತವು ವಿಶ್ವಗುರು ಆಗಬೇಕೆಂದು ನಾವು ಬಯಸುವುದು ಕೇವಲ ಅಧಿಕಾರ ಅಥವಾ ಪ್ರಾಬಲ್ಯ ಸಾಧಿಸುವುದಕ್ಕಾಗಿ ಅಲ್ಲ. ಬದಲಾಗಿ, ಜಗತ್ತಿಗೆ ಶಾಂತಿ ಮತ್ತು ಸುಸ್ಥಿರತೆಯ ದಾರಿ ತೋರಿಸಲು ಅದು ಇಂದಿನ ಜಾಗತಿಕ ಅಗತ್ಯವಾಗಿದೆ. ಸನಾತನ ಧರ್ಮದ ಪುನರುತ್ಥಾನವು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಹಿತದೃಷ್ಟಿಯಿಂದ ನಡೆಯುತ್ತಿರುವ ದೈವಿಕ ಸಂಕಲ್ಪವಾಗಿದೆ ಎಂದು ತಿಳಿಸಿದ್ದಾರೆ.

ಯೋಗಿ ಅರವಿಂದರ ದೂರದೃಷ್ಟಿ

ಸುಮಾರು 100 ವರ್ಷಗಳ ಹಿಂದೆ ಯೋಗಿ ಅರವಿಂದರು ನೀಡಿದ್ದ ಸಂದೇಶವನ್ನು ಸ್ಮರಿಸಿದ ಭಾಗವತ್​, ಹಿಂದೂ ರಾಷ್ಟ್ರದ ಏಳಿಗೆ ಎಂದರೆ ಸನಾತನ ಧರ್ಮದ ಏಳಿಗೆಯಾಗಿದೆ. ಅಲ್ಲದೆ, ಸನಾತನ ಧರ್ಮದ ಏಳಿಗೆಯಾದಾಗ ಮಾತ್ರ ಜಗತ್ತು ಸುಖವಾಗಿರಲು ಸಾಧ್ಯ. ಈಗ ಆ ಸಮಯ ಬಂದಿದೆ ಎಂದು ಹೇಳಿದ್ದಾರೆ.

ವಿಜ್ಞಾನ ಮತ್ತು ಧರ್ಮದ ನಡುವೆ ಸಂಘರ್ಷವಿಲ್ಲ

ಇತ್ತೀಚೆಗೆ ತಿರುಪತಿಯಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿದ್ದನ್ನು ಉಲ್ಲೇಖಿಸಿದ ಆರ್​ಎಸ್​ಎಸ್​ ಮುಖ್ಯಸ್ಥ, ಧರ್ಮ ಮತ್ತು ವಿಜ್ಞಾನ ಒಂದೇ ಸತ್ಯದ ಎರಡು ಮುಖಗಳು. ಧರ್ಮ ಎಂದರೆ ಕೇವಲ ಪೂಜಾ ಪದ್ಧತಿಯಲ್ಲ, ಅದು ಸೃಷ್ಟಿಯ ನಿಯಮವಾಗಿದೆ. ಈ ತತ್ವವನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಘದ ಕಾರ್ಯಕರ್ತರಿಗೆ ಕರೆ
ವಿಶ್ವದ 75ಕ್ಕೂ ಹೆಚ್ಚು ದೇಶಗಳಿಂದ ಬಂದಿದ್ದ 2,000ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಗವತ್​, ಸ್ವಯಂಸೇವಕರು ಕೇವಲ ಸಂಘಟನೆಯಲ್ಲಿ ಕೆಲಸ ಮಾಡಿದರೆ ಸಾಲದು, ಸಮಾಜದ ಪ್ರತಿಯೊಂದು ವರ್ಗವನ್ನೂ ಒಗ್ಗೂಡಿಸಿ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಅಶಾಂತ ಜಗತ್ತಿಗೆ ಭಾರತದ ಮಾರ್ಗ

ಜಗತ್ತು ಇಂದು ಯುದ್ಧಗಳು ಮತ್ತು ಆಂತರಿಕ ಸಂಘರ್ಷಗಳಿಂದ ನಲುಗುತ್ತಿದೆ. ಇಂತಹ ಸಮಯದಲ್ಲಿ ಪಾಶ್ಚಿಮಾತ್ಯ ದೇಶಗಳ ವಿಚಾರಧಾರೆಗಳು ವಿಫಲವಾಗಿವೆ. ಜಗತ್ತು ಇಂದು ಮೂರನೇ ದಾರಿಯನ್ನು ಹುಡುಕುತ್ತಿದೆ. ಆ ದಾರಿ ಭಾರತದ ಆಧ್ಯಾತ್ಮಿಕ ಮತ್ತು ಮಾನವೀಯ ಮೌಲ್ಯಗಳಲ್ಲಿದೆ ಎಂದು ಭಾಗವತ್ ಹೇಳಿದ್ದಾರೆ.

ಹಿಂದೂ ರಾಷ್ಟ್ರ ಮತ್ತು ವಿಶ್ವಕಲ್ಯಾಣ

ಹಿಂದೂ ಎಂಬುದು ಕೇವಲ ಒಂದು ಧರ್ಮವಲ್ಲ, ಅದು ಜೀವನ ನಡೆಸುವ ರೀತಿಯಾಗಿದೆ. ಭಾರತವು ಬಲಿಷ್ಠವಾದರೆ ಅದು ಇತರ ದೇಶಗಳನ್ನು ಆಕ್ರಮಿಸುವುದಿಲ್ಲ, ಬದಲಾಗಿ ಎಲ್ಲರನ್ನೂ ಒಳಗೊಳ್ಳುವ ವಸುಧೈವ ಕುಟುಂಬಕಂ ತತ್ವವನ್ನು ಪಾಲಿಸುತ್ತದೆ. ಈ ಕಾರಣಕ್ಕಾಗಿಯೇ ಭಾರತವು ವಿಶ್ವಗುರು ಆಗುವುದು ಅಗತ್ಯವಾಗಿದೆ. ದೇಶದ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣವಲ್ಲ. ಪ್ರತಿಯೊಬ್ಬ ನಾಗರಿಕನೂ ಸಂಸ್ಕಾರವಂತನಾದಾಗ ಮಾತ್ರ ದೇಶವು ಜಗತ್ತಿಗೆ ಮಾದರಿಯಾಗಬಲ್ಲದು. ನಾವು ಕೇವಲ ಮಾತಿನಲ್ಲಿ ವಿಶ್ವಗುರು ಆಗಬಾರದು. ನಮ್ಮ ಆಚರಣೆ ಮತ್ತು ಸಂಸ್ಕೃತಿಯ ಮೂಲಕ ಅದನ್ನು ಸಾಧಿಸಬೇಕು ಎಂದು ಭಾಗವತ್​ ವಿವರಿಸಿದ್ದಾರೆ.
ತೆಲಂಗಾಣದಲ್ಲಿ ನಡೆದ ಈ ವಿಶ್ವ ಸಂಘ ಶಿಬಿರವು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾಗತಿಕ ಹಿಂದೂ ಸಂಘಟನೆಗಳ ಸಮಾಗಮವಾಗಿದೆ. ಈ ಬಾರಿ ಧರ್ಮೇ ಸರ್ವಂ ಪ್ರತಿಷ್ಠಿತಂ (ಧರ್ಮವೇ ಎಲ್ಲದಕ್ಕೂ ಆಧಾರ) ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು,(ಏಜೆನ್ಸೀಸ್).