ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ಸುಧಾರಣೆಗಳು ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಒಕ್ಕೂಟಗಳು ಇಂದು (ಫೆ.12) ದೇಶಾದ್ಯಂತ ಭಾರತ್ ಬಂದ್‌ಗೆ(Bharat Bandh) ಕರೆ ನೀಡಿವೆ. ಈ ಪ್ರತಿಭಟನೆಯಿಂದಾಗಿ ದೇಶಾದ್ಯಂತ ಜನಜೀವನದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ.
ಯಾವುದೆಲ್ಲಾ ಬಂದ್ ಆಗಲಿವೆ..?
ಇಂದಿನ ಬಂದ್‌ನಿಂದಾಗಿ ಸಾರ್ವಜನಿಕ ವಲಯದ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
ಬ್ಯಾಂಕಿಂಗ್ ಸೇವೆ: ಎಸ್‌ಬಿಐ (SBI) ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಪ್ರಮುಖ ಬ್ಯಾಂಕುಗಳು ಈಗಾಗಲೇ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡಿವೆ. ನಗದು ವಹಿವಾಟು ಮತ್ತು ಬ್ಯಾಂಕ್ ಕೆಲಸಗಳಲ್ಲಿ ಅಡಚಣೆ ಉಂಟಾಗಬಹುದು.
ಸರ್ಕಾರಿ ಕಚೇರಿಗಳು: ಸರ್ಕಾರಿ ನೌಕರರ ಸಂಘಟನೆಗಳು ಬಂದ್ ಬೆಂಬಲಿಸುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾಗಬಹುದು.
ಸಾರ್ವಜನಿಕ ಸಾರಿಗೆ: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಂತಹ ಸಾರಿಗೆ ಸಂಸ್ಥೆಗಳ ಕೆಲವು ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆಯಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯವಾಗಬಹುದು. ಆಟೋ ಮತ್ತು ಟ್ಯಾಕ್ಸಿ ಸಂಚಾರವೂ ವಿರಳವಾಗಿರುವ ಸಾಧ್ಯತೆಯಿದೆ.
ಮಾರುಕಟ್ಟೆಗಳು: ಪ್ರಮುಖ ವ್ಯಾಪಾರಿ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಮಾರುಕಟ್ಟೆಗಳು ಮತ್ತು ಅಂಗಡಿ ಮುಂಗಟ್ಟುಗಳು ಮುಚ್ಚುವ ಸಂಭವವಿದೆ.
ಯಾವುದೆಲ್ಲಾ ತೆರೆದಿರುತ್ತವೆ? (ಅಗತ್ಯ ಸೇವೆಗಳು)
ಬಂದ್ ನಡುವೆಯೂ ಜನಸಾಮಾನ್ಯರ ಹಿತದೃಷ್ಟಿಯಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ತುರ್ತು ಚಿಕಿತ್ಸೆ, ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ವಿಮಾನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಆದರೆ ನಿಲ್ದಾಣಕ್ಕೆ ಹೋಗುವ ದಾರಿಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಬಹುದು.
ಬಹುತೇಕ ಖಾಸಗಿ ಕಂಪನಿಗಳು ಮತ್ತು ಐಟಿ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ (ಕೆಲವೆಡೆ ವರ್ಕ್ ಫ್ರಮ್ ಹೋಮ್ ನೀಡುವ ಸಾಧ್ಯತೆಯಿದೆ). ಹಾಲು, ದಿನಪತ್ರಿಕೆ ಮತ್ತು ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ(ಏಜೆನ್ಸೀಸ್).