ಚಂಡೀಗಢ: ಪಂಜಾಬ್‌ನಲ್ಲಿ(Punjab Politics) ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿಗೆ (ಆಪ್) ತವರು ನೆಲದಲ್ಲೇ ಭಾರಿ ಆಘಾತ ಎದುರಾಗಿದೆ. ಸ್ವತಃ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸೋದರಸಂಬಂಧಿ ಜ್ಞಾನ್ ಸಿಂಗ್ ಮಾನ್ ಅವರು ಆಪ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ನಡೆದಿರುವ ಈ ರಾಜಕೀಯ ಬದಲಾವಣೆಯು ಪಂಜಾಬ್ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಕಮಲ ಹಿಡಿದ ಪ್ರಮುಖರು
ಕೇವಲ ಜ್ಞಾನ್ ಸಿಂಗ್ ಮಾನ್ ಮಾತ್ರವಲ್ಲದೆ, ಅವರೊಂದಿಗೆ ಪಂಜಾಬ್‌ನ ಇನ್ನೂ ಮೂವರು ಪ್ರಮುಖ ಗಣ್ಯರು ಕೇಸರಿ ಪಡೆಗೆ ಸೇರ್ಪಡೆಯಾಗಿದ್ದಾರೆ. ಬರ್ನಾಲಾ ಮೂಲದ ಉದ್ಯಮಿ ಮತ್ತು ಅನಿವಾಸಿ ಭಾರತೀಯ (NRI) ಬಲ್ಜಿಂದರ್ ಸಿಂಗ್ ಬರ್ನಾಲಾ ಹಾಗೂ ಜಲಾಲಾಬಾದ್ ಶಾಸಕ ಗೋಲ್ಡಿ ಕಾಂಬೋಜ್ ಅವರ ಮಾಜಿ ಆಪ್ತ ಸಹಾಯಕ (PA) ಮಂವಿಂದರ್ ಸಿಂಗ್ ಸಜ್ಜನ್ ಖೇರಾ ಅವರು ಬಿಜೆಪಿಯ ಕೈ ಹಿಡಿದಿದ್ದಾರೆ.
ಹಳಿ ತಪ್ಪಿದ ಬದಲಾವಣೆಯ ಕನಸು
ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಉಪಸ್ಥಿತಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಜಖರ್ ಅವರು ಹೊಸ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಅವರು, "ಬದಲಾವಣೆಯ ಆಶಯದೊಂದಿಗೆ ಇವರೆಲ್ಲರೂ ಆಪ್ ಸೇರಿದ್ದರು. ಆದರೆ ಇಂದು ಆ ಕನಸುಗಳು ಭಗ್ನವಾಗಿರುವುದನ್ನು ಕಂಡು, ದೇಶದ ಹಿತದೃಷ್ಟಿಯಿಂದ ಬಿಜೆಪಿ ಕುಟುಂಬದ ಭಾಗವಾಗಲು ನಿರ್ಧರಿಸಿದ್ದಾರೆ" ಎಂದು ಹೇಳಿದರು.
ಅಧಿಕಾರಿಗಳಿಗೆ ಎಚ್ಚರಿಕೆ
ಅಮೃತಸರ, ಬಟಾಲಾ, ಲೂಧಿಯಾನ ಸೇರಿದಂತೆ ರಾಜ್ಯದ ವಿವಿಧೆಡೆ ಬಿಜೆಪಿ ಕಚೇರಿಗಳು ಮತ್ತು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಯನ್ನು ಸುನಿಲ್ ಜಖರ್ ತೀವ್ರವಾಗಿ ಖಂಡಿಸಿದರು. "ಪ್ರತಿಯೊಂದಕ್ಕೂ ಲೆಕ್ಕ ನೀಡಬೇಕಾಗುತ್ತದೆ" ಎಂದು ಎಚ್ಚರಿಸಿದ ಅವರು, ಪೊಲೀಸರು ಮತ್ತು ನಾಗರಿಕ ಅಧಿಕಾರಿಗಳು ಸರ್ಕಾರದ ಖಜಾನೆಯಿಂದ ಸಂಬಳ ಪಡೆಯುತ್ತಿದ್ದಾರೆ ಹೊರತು ಯಾವುದೇ ರಾಜಕೀಯ ಪಕ್ಷದ ಹಂಗಿನಲ್ಲಲ್ಲ ಎಂಬುದನ್ನು ನೆನಪಿಸಿದರು. ಕಾನೂನು ಮೀರಿ ವರ್ತಿಸುವ ಮತ್ತು ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ದಾಳಿಯಿಂದ ತನಿಖೆ ನಿಲ್ಲದು
ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಸಿಎಂ ಭಗವಂತ್ ಮಾನ್ ಅವರನ್ನು ಉದ್ದೇಶಿಸಿ ಮಾತನಾಡಿದ ಜಖರ್, "ಬಿಜೆಪಿ ಕಚೇರಿಗಳ ಮೇಲೆ ದಾಳಿ ಮಾಡಿಸುವುದರಿಂದ ಇಡಿ (ED) ಮತ್ತು ಸಿಬಿಐ (CBI) ತನಿಖೆಗಳನ್ನು ತಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರ ಎಲ್ಲಿ ನಡೆದಿದ್ದರೂ ತನಿಖೆ ಮುಂದುವರಿಯುತ್ತದೆ ಮತ್ತು ಪ್ರತಿಯೊಬ್ಬ ಭ್ರಷ್ಟನಿಗೂ ಶಿಕ್ಷೆಯಾಗುತ್ತದೆ" ಎಂದು ಗುಡುಗಿದರು. ಅಲ್ಲದೆ, ಪಂಜಾಬ್ ಅನ್ನು ಮಮತಾ ಬ್ಯಾನರ್ಜಿ ಶೈಲಿಯ ಪಶ್ಚಿಮ ಬಂಗಾಳದಂತೆ ಮಾಡಲು ಬಿಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬೆಳವಣಿಗೆಯು ಪಂಜಾಬ್‌ನಲ್ಲಿ ಆಪ್ ಸರ್ಕಾರದ ವಿರುದ್ಧ ಜನರ ಅಸಮಾಧಾನ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ,(ಏಜೆನ್ಸೀಸ್).