ಉಡುಪಿ ಶ್ರೀಕೃಷ್ಣ ಮಠದಲ್ಲಿ ಡಿಸಿಎಂ ಪವನ್ ಕಲ್ಯಾಣ್ 
ದೇಶ

ಭಗವದ್ಗೀತೆ ಮತ್ತು ಸಂವಿಧಾನ ಒಂದೇ ಆಂಧ್ರ ಡಿಸಿಎಂ ಪವನ್ ಕಲ್ಯಾಣ್; ಕಾಂಗ್ರೆಸ್​ನಿಂದ ಟೀಕೆ | Pawan Kalyan

ಬೆಂಗಳೂರು: ಭಾರತೀಯ ಸಂವಿಧಾನ ಮತ್ತು ಹಿಂದೂ ಧಾರ್ಮಿಕ ಗ್ರಂಥ ಭಗವದ್ಗೀತೆ ಒಂದೇ ಎಂದು ಭಾನುವಾರ(ಡಿ. 07) ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) ಹೇಳಿದ್ದಾರೆ.
ಗೀತಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಮತ್ತು ಸಂವಿಧಾನ ಒಂದೇ, ಭಗವದ್ಗೀತೆಯನ್ನು ಮೂಲ ಕೈಬರಹದ ಸಂವಿಧಾನ ಎಂದು ಬಣ್ಣಿಸಿದ್ದಾರೆ. ಮೂಲ ಸಂವಿಧಾನದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಬೋಧಿಸುತ್ತಿರುವುದನ್ನು ತೋರಿಸುವ ವಿವರಣೆ ಇದೆ. ಇದು ಭಾರತದ ನೈತಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕೆಲವರು ಧರ್ಮ ಮತ್ತು ಸಂವಿಧಾನವು ವಿಭಿನ್ನ ಲೋಕಗಳಿಗೆ ಸೇರಿವೆ ಎನ್ನುತ್ತಾರೆ. ಆದರೆ ಅವು ಹಾಗಲ್ಲ. ಧರ್ಮವು ನೈತಿಕ ದಿಕ್ಸೂಚಿಯಾಗಿದೆ. ಸಂವಿಧಾನವು ಕಾನೂನು ದಿಕ್ಸೂಚಿಯಾಗಿದೆ. ಎರಡೂ ನ್ಯಾಯಯುತ, ಶಾಂತಿಯುತ ಹಾಗೂ ಸಹಾನುಭೂತಿಯ ಸಮಾಜವನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

ಪವನ್ ಕಲ್ಯಾಣ್ ಹೇಳಿಕೆಗೆ ಕಾಂಗ್ರೆಸ್ ಟೀಕೆ

ಭಗವದ್ಗೀತೆ ಮತ್ತು ಸಂವಿಧಾನ ಒಂದೇ ಎಂಬ ಪವನ್ ಕಲ್ಯಾಣ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎಂಎಲ್​ಸಿ ಬಿ.ಕೆ.ಹರಿಪ್ರಸಾದ್, ಸಂವಿಧಾನವನ್ನು ಅರ್ಥಮಾಡಿಕೊಳ್ಳದ ಸೆಲೆಬ್ರಿಟಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಸಂವಿಧಾನ ಜಾತ್ಯತೀತವಾಗಿದೆ. ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ ಎಂದು ಕಿಡಿಕಾರಿದ್ದಾರೆ.
ಸಚಿವ ಪ್ರಿಯಾಂಕಾ ಖರ್ಗೆ ಸಹ, ಅವರಿಗೆ ಕಾನೂನು ಮತ್ತು ಧರ್ಮ ಎರಡರ ಬಗ್ಗೆಯೂ ತಿಳುವಳಿಕೆ ಇಲ್ಲ. ಸಂವಿಧಾನ ಮತ್ತು ಧರ್ಮ ಒಂದೇ ಆಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).