ಆಟೋ ರಿಕ್ಷಾ, ಕ್ಯಾಬ್ ಚಾಲಕರಿಗೆ ಅಮಿತ್ ಠಾಕ್ರೆ ಎಚ್ಚರಿಕೆ
- ಮರಾಠಿ ಭಾಷೆಯ ಬದಲಿಗೆ ಹಿಂದಿ ಮಾತನಾಡಿದರೆ ಅಟ್ಟಾಡಿಸಿ ಹೊಡೆಯುತ್ತೇವೆ!
- ಆಟೋ ರಿಕ್ಷಾ, ಕ್ಯಾಬ್ ಚಾಲಕರಿಗೆ ಅಮಿತ್ ಠಾಕ್ರೆ ಎಚ್ಚರಿಕೆ
- ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಎಂಎನ್ಎಸ್ ನಾಯಕ ವಾಗ್ದಾಳಿ
ಮುಂಬೈ: ಹಿಂದಿ ಭಾಷೆ ಇದು ಉತ್ತರ ಪ್ರದೇಶದ ಭಾಷೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮರಾಠಿ ಬದಲು, ಹಿಂದಿ ಮಾತನಾಡುವ ರಿಕ್ಷಾ ಚಾಲಕರನ್ನು ತಮ್ಮ ಪಕ್ಷದ ಕಾರ್ಯಕರ್ತರು ಥಳಿಸಲಿದ್ದಾರೆಂದು ಮಹಾರಾಷ್ಟ್ರ ನವನಿರ್ಮಾಣ್ ಸೇನೆ ಮುಖಂಡ ಅಮಿತ್ ಠಾಕ್ರೆ (Amit Thackeray) ಬೆದರಿಕೆ ಹಾಕಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯದಲ್ಲಿರುವ ಆಟೋ ರಿಕ್ಷಾ ಹಾಗೂ ಕ್ಯಾಬ್ ಚಾಲಕರಿಗೆ ಮುಂದಿನ ಒಂದು ವರ್ಷದ ಒಳಗಾಗಿ ಮರಾಠಿ ಕಲಿಯುವುದು ಕಡ್ಡಾಯವೆಂದು ಘೋಷಿಸಿದ ಹಿನ್ನಲೆ ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
ನಿಮಗೆ ಮಾತೃ ಭಾಷೆಗಿಂತ ಚುನಾವಣೆ ಮುಖ್ಯ!
ಈ ಸಂದರ್ಭದಲ್ಲಿ ಸಿಎಂ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಠಾಕ್ರೆ, ನಮ್ಮ ರಾಜ್ಯದಲ್ಲಿ ನಮ್ಮ ಮಾತ್ರ ಭಾಷೆ ಬಳಸುವವರು ಮಾತ್ರ ಇರಬೇಕು. ಉತ್ತರ ಪ್ರದೇಶದ ಹಿಂದಿ ಭಾಷೆ ಹಾಗೂ ನಮ್ಮವರೊಂದಿಗೆ ಕ್ಯಾತೆ ತೆಗೆಯುವವರನ್ನು ನಾವು ಅಟ್ಟಾಡಿಸಿ ಹೊಡೆಯುತ್ತೇವೆ.
ಈಗ ಮರಾಠಿ ಕಲಿಕೆಗೆ ಒಂದು ವರ್ಷ ಸಮಯ ನೀಡಿದ್ದಾದರೂ ಏಕೆ? ಇಷ್ಟು ವರ್ಷದಿಂದ ಇಲ್ಲೇ ಇರುವವರಿಗೆ ಮರಾಠಿ ಬರುವುದಿಲ್ಲವೇ? ಏಕೆಂದರೆ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆ ಗೆಲ್ಲಬೇಕಿದೆ. ಅದಕ್ಕಾಗಿ ಈ ಕೆಲಸವನ್ನು ನಮ್ಮ ಸಿಎಂ ಮಾಡಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ಫಡ್ನವೀಸ್ ಅವರೇ, ನೀವು ಗುಜರಾತ್, ಪಂಜಾಬ್, ರಾಜಸ್ಥಾನ್ ಇಲ್ಲವೇ ದಕ್ಷಿಣದ ರಾಜ್ಯಗಳಿಗೆ ಬೇಟಿ ನೀಡಿ. ಅಲ್ಲಿಯ ಜನ ಅವರ ಮಾತೃ ಭಾಷೆಗೆ ಎಷ್ಟು ಗೌರವ ಕೊಡುತ್ತಾರೆ, ಅದರ ಬೆಳವಣಿಗೆಗೆ ಎಷ್ಟು ಶ್ರಮಿಸುತ್ತಾರೆಂದು ತಿಳಿಯುತ್ತದೆ. ಆದರೆ ನಿಮಗೆ ಮಾತೃಭಾಷೆಗಿಂತ ಚುನಾವಣೆ ಗೆಲ್ಲುವುದೇ ಮುಖ್ಯವಾಗಿದೆ ಎಂದು ಕಿಡಿ ಕಾರಿದ್ದಾರೆ, (ಏಜನ್ಸೀಸ್).