ಯುವರಾಜ್ ಸಿಂಗ್ ಮತ್ತು ನಟ ಸೋನು ಸೂದ್
ನವದೆಹಲಿ: ಬೆಟ್ಟಿಂಗ್ ಆ್ಯಪ್ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ED), ನಟ ಸೋನು ಸೂದ್, ಕ್ರಿಕೆಟರ್ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ ಸೇರಿ ಹಲವು ಸೆಲೆಬ್ರೆಟಿಗಳ 7.93 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಶುಕ್ರವಾರ(ಡಿ. 19) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ನಟ ಸೋನು ಸೂದ್ ಅವರ ಹೆಸರಿನ 1 ಕೋಟಿ ರೂ. ಮೌಲ್ಯದ ಆಸ್ತಿ, ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ವೈಡಬ್ಲ್ಯೂಸಿ ಹೆಲ್ತ್ ಅಂಡ್ ವೆಲ್ನೆಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 2.5 ಕೋಟಿ ರೂ. ಆಸ್ತಿ, ನಟಿ ನೇಹಾ ಶರ್ಮಾರ 1.26 ಕೋಟಿ ರೂ.ಗಳ ಆಸ್ತಿ, ನಟ ಅಂಕುಶ್ ಹಜ್ರಾಗೆ ಸೇರಿದ 47.2 ಲಕ್ಷ ರೂ.ಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಹಾಗೆಯೇ ರಾಬಿನ್ ಉತ್ತಪ್ಪಗೆ ಸಂಬಂಧಿಸಿದ 8.26 ಲಕ್ಷ ರೂ.ಗಳ ಆಸ್ತಿ, ನಟಿ ಮತ್ತು ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಅವರ 59 ಲಕ್ಷ ರೂ. ಮೌಲ್ಯದ ಆಸ್ತಿ. ಹಾಗೆಯೇ ನಟಿ ಊರ್ವಶಿ ರೌಟೇಲಾ ಅವರ ತಾಯಿ ಮೀರಾ ರೌಟೇಲಾ ಅವರಿಗೆ ಸೇರಿದ 2.02 ಕೋಟಿ ರೂ. ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ತಾತ್ಕಾಲಿಕವಾಗಿ ಮುಟ್ಟುಹಾಕಿಕೊಳ್ಳಲಾಗಿರುವ ಈ ಆಸ್ತಿಗಳನ್ನು 1xBet ಹೆಸರಿನ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ನ ಆದಾಯ ಎಂದು ವರ್ಗಿಕರಿಸಲಾಗಿದೆ. ಮೇಲಿನ ಎಲ್ಲಾ ಸೆಲೆಬ್ರೆಟಿಗಳನ್ನು ಈ ಹಿಂದೆ ಇಡಿ ವಿಚಾರಣೆ ನಡೆಸಿ ಪ್ರಶ್ನಿಸಿತ್ತು. ಇದೇ ಪ್ರಕರಣದಲ್ಲಿ, ನವೆಂಬರ್‌ನಲ್ಲಿ ಮಾಜಿ ಕ್ರಿಕೆಟಿಗ ಶಿಖರ್ ಧವನ್‌ಗೆ ಸಂಬಂಧಿಸಿದ 4.55 ಕೋಟಿ ರೂ. ಮತ್ತು ಸುರೇಶ್ ರೈನಾಗೆ ಸಂಬಂಧಿಸಿದ 6.64 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ (ಏಜೆನ್ಸೀಸ್).