Murli Manohar Joshi | ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ 
ದೇಶ

ತಡವಾಗಿಯಾದರೂ ಸರಿಯಾದ ನಿರ್ಧಾರ ಬಂದಿದೆ!...ಪ್ರಧಾನ್ ರಾಜೀನಾಮೆಯನ್ನು ಸ್ವಾಗತಿಸಿದ ಮುರಳಿ ಮನೋಹರ್ ಜೋಶಿ | Murli Manohar Joshi

ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವ ನಿರ್ಧಾರವನ್ನು ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ( Murli Manohar Joshi) ಸ್ವಾಗತಿಸಿದ್ದಾರೆ. ಇದರೊಂದಿಗೆ, ತಮ್ಮ ಬೃಹತ್ ಆಂದೋಲನವನ್ನು ಶಾಂತಿಯುತವಾಗಿ ಸುಖಾಂತ್ಯಗೊಳಿಸಿದ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಜೋಶಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಹಾಗೂ ಯುವಜನತೆಗೆ ಹೇರಳವಾದ ಅವಕಾಶಗಳನ್ನು ಒದಗಿಸಲಿದ್ದಾರೆ ಎಂಬ ಭರವಸೆಯನ್ನು ನೀಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೋಶಿ, ತಡವಾಗಿಯಾದರೂ ಸರಿಯಾದ ನಿರ್ಧಾರ ಹೊರಬಿದ್ದಿದೆ. ಧರ್ಮೇಂದ್ರ ಪ್ರಧಾನ್ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಪ್ರಧಾನಮಂತ್ರಿಯವರು ಕೂಡ ತಕ್ಷಣದ ಮತ್ತು ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಅಲ್ಲದೆ, ಚಳವಳಿಯನ್ನು ಅತ್ಯಂತ ಶಾಂತಿಯುತವಾಗಿ ಅಂತ್ಯಗೊಳಿಸಿದ್ದಕ್ಕಾಗಿ ನಾನು ಎಲ್ಲಾ ವಿದ್ಯಾರ್ಥಿಗಳನ್ನು ಶ್ಲಾಘಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಈಗ ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಶೀಘ್ರದಲ್ಲೇ ಶಾಂತಿ ನೆಲೆಸಲಿದ್ದು, ಯುವಜನತೆಯ ಉಜ್ವಲ ಭವಿಷ್ಯ ಮತ್ತು ಪ್ರಗತಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ ಎಂದು ನಾನು ಆಶಿಸುತ್ತೇನೆ ಎಂದು ಜೋಶಿ ಬರೆದುಕೊಂಡಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ!

ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಧರ್ಮೇಂದ್ರ ಪ್ರಧಾನ್ ತಮ್ಮ ಸಂಪುಟ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ, ಇಡೀ ಕೇಂದ್ರ ಸಂಪುಟವೇ ಪ್ರಧಾನ್ ಬೆನ್ನಿಗೆ ನಿಂತಿದ್ದು, ಅವರು ರಾಜೀನಾಮೆ ನೀಡದಿರಬಹುದು ಎಂದು ಪಿಟಿಐ ಸುದ್ದಿ ಸಂಸ್ಥೆ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು. ಆದರೆ, ಕಳೆದ 10 ದಿನಗಳಲ್ಲಿ ನಡೆದ ಘಟನೆಗಳಿಂದ ತಮಗೆ ತೀವ್ರ ನೋವಾಗಿದೆ ಎಂದು ತಿಳಿಸಿದ ಸಂಬಲ್‌ಪುರದ ಲೋಕಸಭಾ ಸಂಸದ ಪ್ರಧಾನ್, ಶನಿವಾರ ತಮ್ಮ ಹುದ್ದೆಯನ್ನು ತೊರೆದರು.
ಈ ರಾಜೀನಾಮೆಯು ಸಿಜೆಪಿ ತನ್ನ ಬೃಹತ್ ಪ್ರತಿಭಟನೆಯನ್ನು ಹಿಂಪಡೆಯಲು ಹಾದಿ ಸುಗಮಗೊಳಿಸಿತು. ದೆಹಲಿ ಮತ್ತು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಿಂಪಡೆಯುವುದು ಹಾಗೂ ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆಗೆ ಶರಣಾದ ಅಭ್ಯರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ತಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಸ್ಪಷ್ಟಪಡಿಸಿದ್ದಾರೆ.
ಸಿಜೆಪಿ ಸಲ್ಲಿಸಿರುವ ಬೇಡಿಕೆಗಳ ಚಾರ್ಟರ್‌ಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಚರ್ಚಿಸಲು ಸರ್ಕಾರ ಮತ್ತು ಸಿಜೆಪಿ ಪ್ರತಿನಿಧಿಗಳು ಮುಂದಿನ ನಾಲ್ಕು ವಾರಗಳಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ(ಏಜೆನ್ಸೀಸ್​).