ಲಖನೌ: ಸಂಸತ್ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬೆಂಬಲ ನೀಡದ ಕಾಂಗ್ರೆಸ್, ಎಸ್‌ಪಿ, ಟಿಎಂಸಿ ಹಾಗೂ ಡಿಎಂಕೆ ಸೇರಿದಂತೆ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ವಿಪಕ್ಷಗಳು ಮಹಿಳೆಯರಿಗೆ ದ್ರೋಹ ಬಗೆಹರಿದಿದ್ದು, ತಾನೂ ಮಹಿಳಾ ಮೀಸಲಾತಿಯನ್ನು ಅನುಷ್ಠಾನ ಮಾಡಿಯೇ ತೀರುತ್ತೇನೆ ಭರವಸೆ ನೀಡಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಹಿಳಾ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿರುವ ಅವರು, ಮಹಾ ಯಜ್ಞದ ಆರಂಭಕ್ಕಾಗಿ ಎಲ್ಲಾ ಮಹಿಳೆಯರಿಂದ ಆಶೀರ್ವಾದ ಪಡೆಯಲು ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಕಾಶಿಯ ಸಂಸದನಾಗಿ, ಪ್ರಧಾನ ಮಂತ್ರಿಯಾಗಿ, ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ಗುರಿಯನ್ನು ಸಾಧಿಸಲು ನನಗೆ ನಿಮ್ಮ ಆಶೀರ್ವಾದ ಬೇಕು ಎಂದು ಹೇಳಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವುದು ನನ್ನ ಪ್ರಮುಖ ಉದ್ದೇಶ ಎಂದಿರುವ ಅವರು, ಭಾರತೀಯ ಜನತಾ ಪಕ್ಷ ಇತ್ತೀಚೆಗೆ ಮಸೂದೆಯನ್ನು ಮಂಡಿಸಲು ಪ್ರಯತ್ನಿಸಿದ್ದು, ಎಸ್‌ಪಿ ಮತ್ತು ಕಾಂಗ್ರೆಸ್‌ನಂತಹ ಪಕ್ಷಗಳ ವಿರೋಧದಿಂದಾಗಿ ನಮ್ಮ ಪ್ರಯತ್ನ ವಿಫಲವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಮೀಸಲಾತಿ ಜಾರಿಗೆ ತರುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ಹೆಣ್ಣುಮಕ್ಕಳು ತಮ್ಮ ಮನೆಗಳಿಂದ ಹೊರಬರುವುದು ಕಷ್ಟಕರವಾಗಿತ್ತು. ವಂಶಾಡಳಿತ ಪಕ್ಷಗಳಾದ ಕಾಂಗ್ರೆಸ್, ಎಸ್‌ಪಿ, ಟಿಎಂಸಿ ಹಾಗೂ ಡಿಎಂಕೆ ಪಕ್ಷಗಳು ಮಹಿಳೆಯರಿಗೆ ದ್ರೋಹ ಬಗೆದಿವೆ. ಈ ಪಕ್ಷಗಳು ಹೆಣ್ಣುಮಕ್ಕಳು ವಿಧಾನಸಭೆ ಅಥವಾ ಲೋಕಸಭೆಗೆ ಆಯ್ಕೆಯಾಗುವುದನ್ನು ಬಯಸಲ್ಲ. ಕಳೆದ 40 ವರ್ಷಗಳಿಂದ ಮಹಿಳಾ ಮೀಸಲಾತಿಗೆ ಬ್ರೇಕ್ ಹಾಕಿವೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).