ಬೆಂಗಳೂರು: ಸಾಮಾನ್ಯವಾಗಿ ಯುವಕರು ತಮ್ಮ ಮೊದಲ ಸಂಬಳ ಬಂದಾಗ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾರೆ ಇಲ್ಲವೇ ಪೋಷಕರನ್ನು ಕರೆದುಕೊಂಡು ಹೋಗಿ ಸಂಭ್ರಮಿಸುತ್ತಾರೆ. ಆದರೆ, ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ತಮ್ಮ ಸಾಧನೆಯನ್ನು ಸಂಭ್ರಮಿಸಲು ಆರಿಸಿಕೊಂಡ ಹಾದಿ ಇಡೀ ಇಂಟರ್‌ನೆಟ್ ಲೋಕದ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ಹೌದು, ತಾವು ಕೆಲಸ ಮಾಡುವ ಜಗತ್ತಿನ ದೈತ್ಯ ಟೆಕ್ ಕಂಪನಿ ಮೈಕ್ರೋಸಾಫ್ಟ್ (Microsoft) ಕಚೇರಿಗೆ ತಮ್ಮ 81 ವರ್ಷದ ಪ್ರೀತಿಯ ಅಜ್ಜಿಯನ್ನು ಕರೆದುಕೊಂಡು ಹೋಗುವ ಮೂಲಕ ಅವರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಮೊಮ್ಮಗನ ಸಾಧನೆ ಕಂಡು ಆ ವೃದ್ಧ ಅಜ್ಜಿ ಭಾವುಕರಾದ ಆ ಸುಂದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಜ್ಜಿಯ ಕಣ್ಣಲ್ಲಿ ಆನಂದ ಬಾಷ್ಪ
ವೈರಲ್ ಆಗಿರುವ ವಿಡಿಯೋದಲ್ಲಿ, ಕಚೇರಿಯ ದೊಡ್ಡ ಗಾಜಿನ ಕಿಟಕಿಗಳ ಮೂಲಕ ಹೊರಗಿನ ಬೆಂಗಳೂರು ನಗರದ ಸೌಂದರ್ಯವನ್ನು ಅಜ್ಜಿ ಕುತೂಹಲದಿಂದ ವೀಕ್ಷಿಸುತ್ತಿರುವುದನ್ನು ಕಾಣಬಹುದು. ಕಂಪನಿಯ ಒಳಗಿನ ತಂತ್ರಜ್ಞಾನದ ವಾತಾವರಣ ಮತ್ತು ಮೊಮ್ಮಗನಿಗೆ ಸಿಕ್ಕಿರುವ ಗೌರವವನ್ನು ಕಂಡು ಆ ವೃದ್ಧೆಯ ಕಣ್ಣುಗಳು ಆನಂದ ಬಾಷ್ಪದಿಂದ ತುಂಬಿಬಂದಿದ್ದವು.
ನನ್ನ ಯಶಸ್ಸಿಗೆ ಇವರೇ ಸ್ಫೂರ್ತಿ
ಈ ಭಾವುಕ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಆ ಟೆಕ್ಕಿ, "ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಿದು. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಅಜ್ಜಿಯೇ ಕಾರಣ" ಎಂದು ಬರೆದುಕೊಂಡಿದ್ದಾನೆ. "ಅವರಿಗೆ ಇಂತಹ ದೊಡ್ಡ ಕಾರ್ಪೊರೇಟ್ ಜಗತ್ತನ್ನು ತೋರಿಸಬೇಕು ಮತ್ತು ನನ್ನ ಕೆಲಸದ ವಾತಾವರಣವನ್ನು ಪರಿಚಯಿಸಬೇಕು ಎಂಬುದು ನನ್ನ ದೊಡ್ಡ ಕನಸಾಗಿತ್ತು. ಅದು ಇಂದು ನನಸಾಗಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ನೆಟ್ಟಿಗರ ಮನಗೆದ್ದ ಮೊಮ್ಮಗನ ಪ್ರೀತಿ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸದ್ಯ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಿರಿಯ ತಲೆಮಾರಿನ ಮೇಲಿರುವ ಯುವಕನ ಪ್ರೀತಿ ಮತ್ತು ಗೌರವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ."ಇಂದಿನ ಆಧುನಿಕ ಜಗತ್ತಿನಲ್ಲಿ ಹಿರಿಯರನ್ನು ವೃದ್ಧಾಶ್ರಮಕ್ಕೆ ತಳ್ಳುವವರ ನಡುವೆ, ತನ್ನ ಯಶಸ್ಸಿನಲ್ಲಿ ಅಜ್ಜಿಯನ್ನು ಭಾಗಿಯಾಗಿಸಿಕೊಂಡ ಈ ಮೊಮ್ಮಗ ಎಲ್ಲರಿಗೂ ಮಾದರಿ" ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಕಚೇರಿ ಸಿಬ್ಬಂದಿಯಿಂದಲೂ ಹಾರೈಕೆ
ಅಜ್ಜಿ ಕಚೇರಿಗೆ ಬಂದಾಗ ಅಲ್ಲಿದ್ದ ಮೈಕ್ರೋಸಾಫ್ಟ್‌ನ ಇತರ ಸಹೋದ್ಯೋಗಿಗಳು ಮತ್ತು ಸಿಬ್ಬಂದಿ ಕೂಡ ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.ವೃದ್ಧೆಯ ಮುಖದಲ್ಲಿದ್ದ ಆ ಮುಗ್ಧ ನಗು ಮತ್ತು ಮೊಮ್ಮಗನ ಹೆಮ್ಮೆಯ ನಡಿಗೆ ಇಡೀ ಕಚೇರಿಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು ಎಂದು ಅಲ್ಲಿನ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).