Bengaluru ಸಾಂದರ್ಭಿಕ ಚಿತ್ರ
ಬೆಂಗಳೂರು: ಇಲ್ಲಿನ ಜನಪ್ರಿಯ ರೆಸ್ಟೋರೆಂಟ್ ಒಂದಕ್ಕೆ ಆಹಾರ ಸೇವಿಸಲು ತೆರಳಿದ್ದ ಗ್ರಾಹಕರೊಬ್ಬರಿಗೆ ಬಿಲ್‌ನಲ್ಲಿ ಅವರ ಹೆಸರಿನ ಬದಲಿಗೆ ದೇಹದ ವಿವರಣೆಯನ್ನು ಬರೆದು ಕೊಟ್ಟಿರುವ ಘಟನೆಯೊಂದು (
ಸಿಲಿಕಾನ್ ಸಿಟಿಯ ಕೋರಮಂಗಲ ಪ್ರದೇಶದಲ್ಲಿರುವ 'ಸುಬ್ಕೋ ದಿ ಕ್ರಾಫ್ಟರಿ' (Subko The Craftery) ಎಂಬ ರೆಸ್ಟೋರೆಂಟ್‌ಗೆ ತೆರಳಿದ್ದ ವ್ಯಕ್ತಿಯೊಬ್ಬರು ತಮಗಿಷ್ಟವಾದ ಆಹಾರವನ್ನು ಆರ್ಡರ್ ಮಾಡಿ ಅದಕ್ಕೆ ನಿಗದಿತ ಹಣವನ್ನು ಪಾವತಿಸಿದ್ದರು. ಆದಾಗ್ಯೂ, ಕೈಗೆ ಬಂದ ಬಿಲ್ ಸ್ವೀಕರಿಸಿದಾಗ ಅದರಲ್ಲಿ ಗ್ರಾಹಕರ ಹೆಸರಿನ ಜಾಗದಲ್ಲಿ ನಮೂದಿಸಲಾಗಿದ್ದ ಸಾಲುಗಳನ್ನು ನೋಡಿ ಅವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಬಿಲ್‌ನಲ್ಲಿ ಅವರ ಹೆಸರಿನ ಬದಲಿಗೆ Little fat black shirt ಎಂದು ಬರೆಯಲಾಗಿತ್ತು.
ಈ ಘಟನೆಯಿಂದ ಹತಾಶೆ ವ್ಯಕ್ತಪಡಿಸಿದ ಗ್ರಾಹಕರು ಬಿಲ್‌ನ ಫೋಟೋವನ್ನು ರೆಡ್ಡಿಟ್ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯವಾಗಿ ಗ್ರಾಹಕರನ್ನು ಅವರ ಹೆಸರು, ಟೇಬಲ್ ಸಂಖ್ಯೆ ಅಥವಾ ಆರ್ಡರ್ ಐಡಿಯಿಂದ ಬಹಳ ಸುಲಭವಾಗಿ ಗುರುತಿಸಬಹುದು. ಅದನ್ನು ಬಿಟ್ಟು ಒಬ್ಬ ವ್ಯಕ್ತಿಯ ದೇಹದ ಆಕಾರ ಹಾಗೂ ಬಣ್ಣವನ್ನು ಆಧಾರವಾಗಿಟ್ಟುಕೊಂಡು ಈ ರೀತಿ ಗುರುತಿಸುವುದು ಸಂಪೂರ್ಣವಾಗಿ ತಪ್ಪು. ಆದಾಗ್ಯೂ, ಪುರುಷರ ಮೇಲಿನ 'ಬಾಡಿ ಶೇಮಿಂಗ್' ಅನ್ನು ಕೇವಲ ಒಂದು ಸಣ್ಣ ತಮಾಷೆ ಎಂದು ಪರಿಗಣಿಸಿ ನಿರ್ಲಕ್ಷಿಸಬಾರದು ಎಂದು ಬರೆದುಕೊಂಡಿದ್ದು, ಈ ಪೋಸ್ಟ್ಗೆ ನೆಟ್ಟಿಗರು ಸಿಬ್ಬಂದಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸುಬ್ಕೋ ಕಾಫಿ ರೋಸ್ಟರ್ಸ್ (Subko Coffee Roasters) ಸಂಸ್ಥೆಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.
ಕೆಲವು ತಪ್ಪುಗಳನ್ನು ಸೌಮ್ಯವಾಗಿ ಅಥವಾ ರಹಸ್ಯವಾಗಿ ಸರಿಪಡಿಸಬಹುದು, ಆದರೆ ಇನ್ನು ಕೆಲವು ತಪ್ಪುಗಳನ್ನು ಎಲ್ಲರ ಎದುರೇ ಒಪ್ಪಿಕೊಂಡು ಸರಿಪಡಿಸಬೇಕಾಗುತ್ತದೆ. ಏಕೆಂದರೆ, ಅಂತಹ ತಪ್ಪುಗಳನ್ನು ಮುಚ್ಚಿಡುವುದರಿಂದ ಆ ರೀತಿಯ ಸಂಸ್ಕೃತಿಯನ್ನು ಬೆಳೆಸಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದೆ.
ಜೊತೆಗೆ, ಯಾವುದೇ ರೀತಿಯ ಬಾಡಿ ಶೇಮಿಂಗ್ ತಪ್ಪೇ, ಅದಕ್ಕೆ ಯಾವುದೇ ವಿನಾಯಿತಿಗಳಿಲ್ಲ ಎಂದು ಸ್ಪಷ್ಟಪಡಿಸಿದ ರೆಸ್ಟೋರೆಂಟ್ ಆಡಳಿತ ಮಂಡಳಿ, ಸಂತ್ರಸ್ತ ಗ್ರಾಹಕರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ನೀಡಲಾಗಿರುವ ಲಿಂಕ್ ಮೂಲಕ ಆಂತರಿಕ ದೂರುಗಳ ಸಮಿತಿಯನ್ನು (ICC) ನೇರವಾಗಿ ಸಂಪರ್ಕಿಸುವಂತೆ ಮನವಿ ಮಾಡಿದೆ.
ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾದಿಮಾಡಿಕೊಟ್ಟಿದೆ. ರೆಸ್ಟೋರೆಂಟ್ ತಕ್ಷಣವೇ ತನ್ನ ತಪ್ಪನ್ನು ಒಪ್ಪಿಕೊಂಡು ಆಡಳಿತಾತ್ಮಕವಾಗಿ ಜವಾಬ್ದಾರಿ ವಹಿಸಿಕೊಂಡಿದ್ದಕ್ಕೆ ಕೆಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನೊಂದೆಡೆ ಹೆಚ್ಚಿನ ಜನರು "ಗ್ರಾಹಕರನ್ನು ಗೌರವದಿಂದ ಕಾಣುವುದು ಕನಿಷ್ಠ ಕರ್ತವ್ಯ. ಇಂತಹ ಹೇಳಿಕೆಗಳನ್ನು ತಮಾಷೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಇದು ವೈಯಕ್ತಿಕವಾಗಿ ಗೌರವಕ್ಕೆ ಧಕ್ಕೆ ತರುವಂತಹ ಸಂಗತಿ ಎಂದು ಸಿಬ್ಬಂದಿಯ ಬೇಜವಬ್ದಾರಿ ತನಕ್ಕೆ ಆಕ್ರೋಶ ಹೊರಹಾಕಿದ್ದಾರೆ (ಏಜೆನ್ಸೀಸ್).