ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ 
ದೇಶ

ಬಾಂಗ್ಲಾದೇಶಿ ಎಂದು ಬಂಗಾಳಿ ಮುಸ್ಲಿಂ ಹತ್ಯೆ; ಇದು ಹಿಂದೂಸ್ತಾನ್ ಅಲ್ಲ, ಲಿಂಚಿಸ್ತಾನ್ ಎಂದ ಇಲ್ತಿಜಾ ಮುಫ್ತಿ; ಬಿಜೆಪಿ ತಿರುಗೇಟು | Iltija Mufti

ಶ್ರೀನಗರ: ಬಾಂಗ್ಲಾದೇಶಿ ಎಂಬ ಶಂಕೆಯಲ್ಲಿ ಒಡಿಶಾದಲ್ಲಿ ಬಂಗಾಳಿ ಮುಸ್ಲಿಂ ಕಾರ್ಮಿಕನೊಬ್ಬನನ್ನು ಗುಂಪೊಂದು ಡಿ. 24ರಂದು ಥಳಿಸಿ ಕೊಲೆ ಮಾಡಿದ್ದು, ಇಂದು(ಡಿ. 26) ಪಿಡಿಪಿ ನಾಯಕಿ & ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ(Iltija Mufti) ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ ವಿವಾದವನ್ನು ಸೃಷ್ಟಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಅಕ್ರಮ ವಲಸಿಗ ಎಂಬ ಅನುಮಾನದ ಥಳಿತದಿಂದ ಕೊಲೆಯಾದ ವ್ಯಕ್ತಿಯ ಚಿತ್ರ ಪೋಸ್ಟ್ ಮಾಡಿರುವ ಇಲ್ತಿಜಾ, ಇದು ಭಾರತ ಅಥವಾ ಹಿಂದೂಸ್ತಾನ್ ಅಲ್ಲ ಬದಲಿಗೆ ಇದು ಲಿಂಚಿಸ್ತಾನ್ ಎಂದು ಕರೆದು ವಿವಾದವನ್ನು ಹುಟ್ಟುಹಾಕಿದ್ದಾರೆ.
ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ಡಿ. 24ರಂದು ಶಾಂತಿ ನಗರ ಪ್ರದೇಶದಲ್ಲಿ ಮೃತ ಜುಯೆಲ್ ಶೇಖ್ ಮತ್ತು ಕೆಲವು ಕಾರ್ಮಿಕರು ಕಟ್ಟಡ ನಿರ್ಮಾಣ ಕೆಲಸ ಮಾಡ್ತಿದ್ದರೆನ್ನಲಾಗಿದ್ದು, ಅಲ್ಲಿಗೆ ಬಂದ ಗುಂಪೊಂದು ಅವರತ್ತಿರ ಬೀಡಿ ಕೇಳಿದ್ದು, ಬಳಿಕ ಆಧಾರ್ ತೋರಿಸಿ, ನೀವು ಬಾಂಗ್ಲಾದೇಶಿಯರು ಎಂದು ಅವರೊಂದಿಗೆ ಗಲಾಟೆ ಮಾಡಿದೆ. ಈ ವೇಳೆ ಗಲಾಟೆಯಲ್ಲಿ 19 ವರ್ಷದ ಜುಯೆಲ್ ಶೇಖ್ ಮೃತಪಟ್ಟಿದ್ದಾನೆ. ಗುಂಪು ಹಲ್ಲೆಯಲ್ಲಿ ಭಾಗಿಯಾದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ತಿಜಾ ಹೇಳಿಕೆಗೆ ಬಿಜೆಪಿ ತಿರುಗೇಟು

ಲಿಂಚಿಸ್ತಾನ್ ಎಂಬ ಇಲ್ತಿಜಾ ಮುಫ್ತಿ ಹೇಳಿಕೆಗೆ ಕಿಡಿಕಾರಿರುವ ಕಾಶ್ಮೀರ ಬಿಜೆಪಿ ವಕ್ತಾರ ಅಭಿಜೀತ್ ಜಸ್ರೋಟಿಯಾ, ಅವರು ಮುಸ್ಲಿಮರ ಮೇಲಿನ ಗುಂಪು ಹತ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತಾರೆಯೇ ಹೊರತು ಹಿಂದೂಗಳ ಮೇಲೆ ನಡೆಯುವ ಹಲ್ಲೆಗಳ ಬಗ್ಗೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ (ಏಜೆನ್ಸೀಸ್).