West Bengal SIR | ಮತದಾರರ ಪಟ್ಟಿ ಪರಿಷ್ಕರಣೆಯ ಸಂಗ್ರಹ ಚಿತ್ರ (ಪಿಟಿಐ) 
ದೇಶ

West Bengal SIR | ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಆತಂಕ ವ್ಯಕ್ತಪಡಿಸಿದ ಬಿಜೆಪಿ ನಿಯೋಗ; ನೀಡಿದ ಸಲಹೆಗಳೇನು..?

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾದ ಸಲಹೆಗಳನ್ನು ನೀಡಲು ಬಿಜೆಪಿ ನಿಯೋಗವು ಬುಧವಾರ (ನ.26) ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮತದಾರರ ಪಟ್ಟಿಯಲ್ಲಿನ ನಿಖರತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುವ ಅನೇಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿರುವ ನಿಯೋಗ, ಪಟ್ಟಿಯಲ್ಲಿ ಮೃತ ವ್ಯಕ್ತಿಗಳ ಹೆಸರುಗಳು ಇರುವುದು ಅವರ ಪ್ರಮುಖ ಕಳವಳವಾಗಿದೆ. 2002 ರಿಂದ 2025 ರ ನಡುವೆ ನಿಧನರಾಗಿರುವ ಸಾಕಷ್ಟು ಮತದಾರರು ಇನ್ನೂ ಪಟ್ಟಿಯಲ್ಲಿದ್ದಾರೆ, ಇದು ಚುನಾವಣೆಯ ಸಮಯದಲ್ಲಿ ಅಕ್ರಮಕ್ಕೆ ಕಾರಣವಾಗಬಹುದು ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶಿ ವಲಸಿಗರ ಸಮಸ್ಯೆ..

ಅಕ್ರಮ ವಲಸೆ, ನಿವಾಸಗಳ ಸ್ಥಳಾಂತರ, ಮೃತರಾದವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ನಿಯೋಗ ಸಮಿತಿಯು ಎತ್ತಿ ತೋರಿಸಿದ್ದು. ಬಾಂಗ್ಲಾದೇಶಿ ವಲಸಿಗರ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ವಲಸಿಗರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರಬಹುದು ಎಂದಿರುವ ನಾಯಕರುಗಳು, ರಾಜ್ಯದಲ್ಲಿ ಅಕ್ರಮ ವಲಸೆ ಎನ್ನುವುದು ದೊಡ್ಡ ಆತಂಕವಾಗಿದೆ, ಇದು ಮತದಾರರ ಪಟ್ಟಿಯ ನ್ಯಾಯಸಮ್ಮತತೆಗೆ ಧಕ್ಕೆ ತರಬಹುದು ಎಂದು ಹೇಳಿದ್ದಾರೆ.
ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ, ಗಣನೀಯ ಪ್ರಮಾಣದಲ್ಲಿ ದತ್ತಾಂಶ ಪರಿಶೀಲನೆಗೆ ಸಮಯ ಬಾಕಿ ಇದ್ದು, ನಿಖರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಗಂಭೀರ ಪರಿಶೀಲನಾ ಕಾರ್ಯವಿಧಾನಗಳಿಗೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಇಲ್ಲಿ ಉಲ್ಲೇಖಿಸಲಾಗಿದ್ದು, ಬಿಎಲ್‌ಒಗಳಿಗೆ ನೀಡಲಾಗುತ್ತಿದ್ದ 18,000 ರೂ. ಗೌರವಧನವನ್ನು ತಡೆಹಿಡಿಯಲಾಗಿದೆ ಎಂದು ಗಮನಸೆಳೆದಿದೆ.
ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ದತ್ತಾಂಶ ಚಾಲಿತ ಪರಿಶೀಲನಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ನಿಯೋಗ ಆಯೋಗವನ್ನು ಒತ್ತಾಯಿಸಿದೆ.
ನಕಲಿ, ಬೇರೆಡೆಗೆ ಸ್ಥಳಾಂತರಗೊಂಡ ಮತ್ತು ಮೃತ ಮತದಾರರನ್ನು ಗುರುತಿಸಲು ಯುಐಡಿಎಐ ಡೇಟಾವನ್ನು ಬಳಸಿಕೊಳ್ಳುವಂತೆ ಬಿಜೆಪಿ ನಾಯಕರು ಶಿಫಾರಸು ಮಾಡಿದ್ದು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಕೋರುವ ಅರ್ಜಿಗಳಿಗೆ ನಿರ್ದಿಷ್ಟ ದಾಖಲೆಗಳನ್ನು, ವಿಶೇಷವಾಗಿ ನಿರ್ದಿಷ್ಟ ಕಟ್ಆಫ್ ದಿನಾಂಕದ ನಂತರ ನೀಡಲಾದ ದಾಖಲೆಗಳನ್ನು ಪರಿಶೀಲಿಸುವ ಸ್ಪಷ್ಟ ಮಾನದಂಡಗಳನ್ನು ಸ್ಥಾಪಿಸಬೇಕೆಂದು ಸೂಚಿಸಿದರು(ಏಜೆನ್ಸೀಸ್).