Voter Turnout Record | ವೋಟಿಂಗ್‌ನಲ್ಲಿ ಪಶ್ಚಿಮ ಬಂಗಾಳ ನಂ.1 
ದೇಶ

ವೋಟಿಂಗ್‌ನಲ್ಲಿ ನಂ.1...ಭಾರತದ ಚುನಾವಣಾ ಇತಿಹಾಸದಲ್ಲೇ ಮಹಾ ದಾಖಲೆ; ತ್ರಿಪುರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಪಶ್ಚಿಮ ಬಂಗಾಳ! | Voter Turnout Record

Voter Turnout Record: ಸ್ವಾತಂತ್ರ್ಯ ನಂತರದ ಭಾರತದ ಚುನಾವಣಾ ಇತಿಹಾಸದಲ್ಲೇ ಪಶ್ಚಿಮ ಬಂಗಾಳವು ಐತಿಹಾಸಿಕ ದಾಖಲೆ ಬರೆದಿದ್ದು, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಮತದಾನ ದಾಖಲಾಗುವ ಮೂಲಕ ಪಶ್ಚಿಮ ಬಂಗಾಳವು ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ತ್ರಿಪುರಾವನ್ನು ಹಿಂದಿಕ್ಕಿದೆ ಎಂದು ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯಲ್ಲಿ ಉಲ್ಲೇಖವಾಗಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 93.61 ರಷ್ಟು ಮತದಾರರ ಭಾಗವಹಿಸುವಿಕೆಯೊಂದಿಗೆ ತ್ರಿಪುರಾ ಇದುವರೆಗೆ ರಾಜ್ಯ ಚುನಾವಣೆಗಳಲ್ಲಿ ಅತಿ ಹೆಚ್ಚು ಮತದಾನ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಗುರುವಾರ ಲಭ್ಯವಾದ ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳವು ಶೇಕಡಾ 93.71 ರಷ್ಟು ಮತದಾನವನ್ನು ದಾಖಲಿಸುವ ಮೂಲಕ ಆ ದಾಖಲೆಯನ್ನು ಮೀರಿದೆ. ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮಣಿಪುರಗಳಲ್ಲಿ ಕಳೆದ ಕೆಲವು ವರ್ಷಗಳಿಂದ ವಿಧಾನಸಭಾ ಚುನಾವಣೆಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚಿನ ಮತದಾನವಾಗುತ್ತಾ ಬಂದಿದೆ.
ಈಗ ಪಶ್ಚಿಮ ಬಂಗಾಳವು ನಾಗಾಲ್ಯಾಂಡ್ ಮತ್ತು ಮಣಿಪುರವನ್ನು ಹಿಂದಿಕ್ಕಿ, ಸ್ವಾತಂತ್ರ್ಯದ ನಂತರದ ರಾಜ್ಯದ ಅತ್ಯಧಿಕ ಶೇಕಡಾ 92.67 ರಷ್ಟು ಮತದಾನವನ್ನು ದಾಖಲಿಸಿತ್ತು. ಆದರೆ ಅಂತಿಮ ವರದಿಯಲ್ಲಿ ಈ ಪ್ರಮಾಣ ಶೇಕಡಾ 93.71 ಕ್ಕೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ 2011ರ ಚುನಾವಣೆಯಲ್ಲಿ ಅತಿ ಹೆಚ್ಚು ಅಂದರೆ ಶೇಕಡಾ 84.73 ರಷ್ಟು ಮತದಾನವಾಗಿದ್ದು ದಾಖಲೆಯಾಗಿತ್ತು. ಇನ್ನು ಈ ಬಾರಿಯ ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನದಲ್ಲಿ ಶೇಕಡಾ 92.69 ರಷ್ಟು ಮಹಿಳಾ ಮತದಾರರು ಮತಗಟ್ಟೆಗಳಿಗೆ ಹಾಜರಾಗಿದ್ದರೆ, ಪುರುಷರ ಸಂಖ್ಯೆ ಶೇಕಡಾ 90.92 ರಷ್ಟಿತ್ತು. ಇಲ್ಲಿ ಒಟ್ಟು ಮತದಾರರ ಸಂಖ್ಯೆ 7.5 ಕೋಟಿಗಿಂತ ಹೆಚ್ಚಿದ್ದು, ಚುನಾವಣೆ ಎರಡು ಹಂತಗಳಲ್ಲಿ ನಡೆದಿತ್ತು.
ಇದೇ ವೇಳೆ ಇತರ ರಾಜ್ಯಗಳಲ್ಲೂ ಮತದಾನದ ಪ್ರಮಾಣ ಹೆಚ್ಚಳವಾಗಿರುವ ಮಾಹಿತಿ ಇದ್ದು, ಏಪ್ರಿಲ್ 9 ರಂದು ಅಸ್ಸಾಂ ಮತ್ತು ಪುದುಚೇರಿ ಕ್ರಮವಾಗಿ ಶೇಕಡಾ 85.38 ಮತ್ತು ಶೇಕಡಾ 89.83 ರಷ್ಟು ಮತದಾನ ದಾಖಲಿಸುವ ಮೂಲಕ ತಮ್ಮ ಅತ್ಯಧಿಕ ಮತದಾನದ ದಾಖಲೆಯನ್ನು ಮೀರಿಸಿದವು. ಇನ್ನೊಂದೆಡೆ, ಏಪ್ರಿಲ್ 23 ರಂದು ಎಲ್ಲಾ 234 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದ ತಮಿಳುನಾಡಿನಲ್ಲಿ ಒಟ್ಟು 5.73 ಕೋಟಿ ಮತದಾರರಿದ್ದು, ಅಲ್ಲಿ ಶೇಕಡಾ 84.69 ರಷ್ಟು ಮತದಾನವಾಗಿದೆ.
ಇದು ತಮಿಳುನಾಡಿನಲ್ಲಿ 2011 ರಲ್ಲಿ ದಾಖಲಾಗಿದ್ದ ಶೇಕಡಾ 78.29 ರಷ್ಟು ಮತದಾನದ ದಾಖಲೆಯನ್ನು ಮೀರಿದೆ. ಈ ಬಾರಿ ತಮಿಳುನಾಡಿನಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇಕಡಾ 85.76 ರಷ್ಟಿದ್ದರೆ, ಪುರುಷರ ಭಾಗವಹಿಸುವಿಕೆ ಶೇಕಡಾ 83.57 ರಷ್ಟಿತ್ತು. ಈ ಎಲ್ಲಾ ಅಂಕಿ-ಅಂಶಗಳು ದೇಶದ ಪ್ರಮುಖ ರಾಜ್ಯಗಳಲ್ಲಿ ಮತದಾನದ ಜಾಗೃತಿ ಹೆಚ್ಚಿರುವುದನ್ನು ಸ್ಪಷ್ಟಪಡಿಸಿದೆ(ಏಜೆನ್ಸೀಸ್​​).