Mahua Moitra | ಸಂಸದೆ ಮಹುವಾ ಮೊಯಿತ್ರಾ  
ದೇಶ

ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್; ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಎಐ ವಿಡಿಯೋ ಕಿಚ್ಚು! | Mahua Moitra

ದೆಹಲಿ: ನಕಲಿ ಎಐ ವಿಡಿಯೋ ಹಂಚಿಕೊಂಡಿರುವ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ (Mahua Moitra) ವಿರುದ್ಧ ದೆಹಲಿಯ ಮಂದಿರ ಮಾರ್ಗ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ಈ ಬೆಳವಣಿಗೆಯು ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ವೇದಿಕೆ ಮಾಡಿಕೊಟ್ಟಿದೆ.
ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಮತ್ತು ನಡೆಯುತ್ತಿರುವ ಚುನಾವಣಾ ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಐ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನಕ್ಕೂ ಮುನ್ನ ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿದ್ದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ವರ್ಚಸ್ಸಿಗೆ ಧಕ್ಕೆ ತರಲು ಈ ವಿಡಿಯೋವನ್ನು ಬಳಸಿಕೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಎಐ ತಂತ್ರಜ್ಞಾನವನ್ನು ಬಳಸಿ ಈ ಕೃತ್ಯ ಎಸಗಲಾಗಿದೆ ಎನ್ನುವುದು ದೂರುದಾರರ ವಾದವಾಗಿದೆ. ಇಂತಹ ತಪ್ಪು ಮಾಹಿತಿಯು ಮತದಾರರನ್ನು ದಾರಿತಪ್ಪಿಸುವ ಮೂಲಕ ಒಟ್ಟಾರೆ ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಸಂಚನ್ನು ಹೊಂದಿದೆ ಎಂದು ಹೇಳಲಾಗಿದೆ.

ವಿವಾದದ ಹಿನ್ನಲೆ!...

ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾವಣೆಯ ಪೂರ್ವಭಾವಿಯಾಗಿ, ಎನ್‌ಕೌಂಟರ್ ಸ್ಪೆಷಲಿಸ್ಟ್​ ಎಂದೇ ಖ್ಯಾತರಾದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತಿರುವ ವಿಡಿಯೋ ವೈರಲ್​ ಆದ ಬಳಿಕ ಈ ಬೆಳವಣಿಗೆ ಆರಂಭವಾಗಿದ್ದು, ಈ ವಿಡಿಯೋದಲ್ಲಿ ಶರ್ಮಾ ಜಹಾಂಗೀರ್ ಖಾನ್ ಸೇರಿದಂತೆ ಇತರ ವ್ಯಕ್ತಿಗಳಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವುದು ಕಂಡುಬಂದಿದೆ. ಒಂದು ವೇಳೆ ಯಾರಾದರೂ ಮತದಾನದ ಪ್ರಕ್ರಿಯೆಯಲ್ಲಿ ಅಡೆತಡೆ ಉಂಟುಮಾಡಲು ಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಈ ವಿಡಿಯೋ ಪ್ರಸಾರವಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿವೆ. ತೃಣಮೂಲ ಕಾಂಗ್ರೆಸ್ ಪಕ್ಷವು ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿದ್ದು, ಅಜಯ್ ಪಾಲ್ ಶರ್ಮಾ ಅವರು ಕಾನೂನುಬಾಹಿರ ಅಥವಾ ಅಸಂವಿಧಾನಿಕವಾಗಿ ವರ್ತಿಸುತ್ತಿರುವುದು ಕಂಡುಬಂದರೆ ಅವರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸುವುದಾಗಿ ತಿಳಿಸಿದೆ. ಮತ್ತೊಂದೆಡೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಈ ವಿವಾದಕ್ಕೆ ಧ್ವನಿಗೂಡಿಸಿದ್ದು, ಶರ್ಮಾ ಬಿಜೆಪಿಯ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ(ಏಜೆನ್ಸೀಸ್​​).