Bengal Man Terror Links Arrested In Bengaluru
ಪಶ್ಚಿಮ ಬಂಗಾಳ ಮೂಲದ ಆಸ್ಫುಲಾ ಮಲ್ಲಿಕ್(25) ಎಂದು ಶಂಕಿತನನ್ನು ಗುರುತಿಸಲಾಗಿದ್ದು, ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಈತ ಜಿಗಣಿಯಲ್ಲಿ ಮನೆ ಮಾಡಿಕೊಂಡಿದ್ದ ಎನ್ನಲಾಗಿದೆ.
ನಿಷೇಧಿತ ಉಗ್ರಗಾಮಿ ಸಂಘಟನೆಯಾದ 'ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್' (TTP) ಜೊತೆ ಸಂಪರ್ಕ ಹೊಂದಿದ್ದ ಮತ್ತು ಪಾಕಿಸ್ತಾನ ಸೇನೆ ಹಾಗೂ ಭಾರತದ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಶಂಕಿತ ಉಗ್ರ ಸಿಕ್ಕಿ ಬಿದ್ದಿದ್ದು ಹೀಗೆ
ಆರೋಪಿಯು ಫೇಸ್‌ಬುಕ್ ಮೂಲಕ ಅಫ್ಘಾನಿಸ್ತಾನದ ಇಮ್ರಾನ್ ಅಹಿಂದಾರ್ ಎಂಬ ಟಿಟಿಪಿ ಸದಸ್ಯನೊಂದಿಗೆ ಸಂಪರ್ಕ ಬೆಳೆಸಿದ್ದ. ಪೊಲೀಸರು ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಮಾಡುವ ವೇಳೆ ಶಂಕಿತ ಉಗ್ರನ ಜಾಡು ಸಿಕ್ಕಿ ಬಿದ್ದಿದೆ. ಆ ಬೆನ್ನಲ್ಲೇ ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಅವರ ನೇತೃತ್ವದ ತಂಡವು ಒಂದು ತಿಂಗಳಿನಿಂದ ಉಗ್ರನ ಆಗು ಹೋಗುಗಳ ಫಾಲೋ ಅಪ್ ಮಾಡುತ್ತಿದ್ದರು. ಕೊನೆಗೆ ಖಚಿತ ಮಾಹಿತಿ ಪಡೆದುಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿದೆ.
ಪಾಕಿಸ್ತಾನದ ವಿರುದ್ಧ ಸಿಟ್ಟು
ಪಾಕಿಸ್ತಾನದಲ್ಲಿ ಮಸೀದಿ ಮತ್ತು ನಾಗರಿಕರ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ ಈತನಿಗೆ ಸಿಟ್ಟಿತ್ತು. ಇಷ್ಟೇ ಅಲ್ಲದೇ ಪ್ಯಾಲೆಸ್ಟೀನ್ ಹಾಗೂ ಇಸ್ರೇಲ್ ಸಂಘರ್ಷದ ವೇಳೆ ಪಾಕಿಸ್ತಾನಕ್ಕಿದ ನಿಲುವಿನ ಬಗ್ಗೆ ಆಗತನಿಗೆ ಹೆಚ್ಚು ಕೋಪವಿತ್ತು ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ
ಅಫ್ಘಾನಿಸ್ತಾನಕ್ಕೆ ಹೋಗಲು ನಿರ್ಧಾರ
ಟಿಟಿಪಿ ಸಂಘಟನೆ ಸೇರಲು ಮತ್ತು ಪಾಕಿಸ್ತಾನ ಸೇನೆಯ ಮೇಲೆ ಸೇಡು ತೀರಿಸಿಕೊಳ್ಳಲು ಆತ ಅಫ್ಘಾನಿಸ್ತಾನಕ್ಕೆ ಹೋಗಲು ನಿರ್ಧರಿಸಿದ್ದ. ಇದಕ್ಕಾಗಿ ಪಾಸ್‌ಪೋರ್ಟ್ ಪಡೆದು ವೀಸಾಕ್ಕೂ ಅರ್ಜಿ ಸಲ್ಲಿಸಿದ್ದ. ಆದರೆ, ಕೆಲವು ಕಾರಣಗಳಿಂದ ಆತನ ಪ್ರಯಾಣ ಸಾಧ್ಯವಾಗಿರಲಿಲ್ಲ.
ಆರೋಪಿಯ ಮೊಬೈಲ್‌ನಿಂದ ಆತನ ಉದ್ದೇಶಗಳನ್ನು ದೃಢಪಡಿಸುವ ಸಂದೇಶಗಳು ಮತ್ತು ಆಡಿಯೋ ರೆಕಾರ್ಡಿಂಗ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 113(3) ಅಡಿಯಲ್ಲಿ ಭಯೋತ್ಪಾದಕ ಕೃತ್ಯದ ಸಂಚು ಮತ್ತು ಪ್ರಚೋದನೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದ್ದು, ಆತನ ಸ್ಥಳೀಯ ಸಂಪರ್ಕಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).